
ಪುತ್ತೂರು: ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಪುತ್ತೂರು ಕ್ಷೇತ್ರದ ೧೯ ಕಡೆಗಳಲ್ಲಿ ಕೆಪಿಎಸ್ ಶಾಲೆಗಳು ಆರಂಭಗೊಳ್ಳಲಿದೆ. ಈ ಬಗ್ಗೆ ಸರ್ಕಾರದ ಜತೆಗೆ ಮಾತುಕತೆ ನಡೆಸಿದ್ದೇನೆ. ಪ್ರಸ್ತು ೫ ಕೆಪಿಎಸ್ ಶಾಲೆಗಳಿಗೆ ಮಂಜೂರಾತಿ ದೊರೆತಿದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರತಿಯೊಂದು ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ ಹಾಗೂ ಜನತೆಗೆ ಉತ್ತಮವಾದ ಆರೋಗ್ಯ ಸೇವೆ ದೊರಕಬೇಕು. ಇದಕ್ಕೆ ಆದ್ಯತೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಬೆಟ್ಟಂಪಾಡಿ ಗ್ರಾಪಂ ಸಭಾಂಗಣದಲ್ಲಿ ೩೦ ನೇ ಅಕ್ರಮ ಸಕ್ರಮ ಬೈಠಕ್ ಹಾಗೂ ೯೪ ಸಿ ಹಕ್ಕು ಪತ್ರ ವಿತರಣೆ ನಡೆಸಿ ಮಾತನಾಡಿದರು.
ಬಡವರ್ಗದ ಜನತೆಯ ಮಕ್ಕಳೂ ಕನ್ನಡದ ಜತೆಗೆ ಆಂಗ್ಲಭಾಷೆ ಕಲಿಯಬೇಕು. ಇದು ಉದ್ಯೋಗಕ್ಕೆ ಪೂರಕವಾಗುತ್ತದೆ. ವಿದ್ಯಾವಂತ ನಿರುದ್ಯೋಗಿಗಳು ಸೂಕ್ತ ಉದ್ಯೋಗ ಪಡೆದುಕೊಳ್ಳಬೇಕು. ಮೆಡಿಕಲ್ ಕಾಲೇಜು ಆರಂಭದ ಹೊತ್ತಿಗೆ ಸುಮಾರು ೨೫ ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಕೇವಲ ರಸ್ತೆ ನಿರ್ಮಾಣ ಮಾತ್ರ ಅಭಿವೃದ್ಧಿಯಲ್ಲ. ಜನತೆಯ ಸಂಕಷ್ಟಕ್ಕೆ ಸ್ಪಂಧಿಸುವುದು ಅಭಿವೃದ್ಧಿಯ ಭಾಗವಾಗಿದೆ ಎಂದು ಅವರು ಹೇಳಿದರು.
೨೦೦೦ ಎಕ್ರೆಗಿಂತಲೂ ಹೆಚ್ಚು ಭೂಮಿ ಸಕ್ರಮ ಮಾಡಿದ್ದೇವೆ
ಮೂರು ವರ್ಷದ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೦೦೦ ಕ್ಕೂ ಮಿಕ್ಕಿ ಭೂಮಿಯನ್ನು ರೈತರಿಗೆ ಸಕ್ರಮ ಮಾಡಿಕೊಟ್ಟಿದ್ದೇವೆ. ಎಷ್ಟೋ ವರ್ಷದಿಂದ ತಮ್ಮ ಒಡೆತನದ ಭೂಮಿಗಾಗಿ ಅರ್ಜಿ ಹಾಕಿ ಕಚೇರಿ ತಿರುಗುವಂತಾಗಿತ್ತು. ಈ ಹಿಂದೆ ಉಳ್ಳವರ ಭೂಮಿಗೆ ಮಂಜೂರಾತಿ ಸಿಗುತ್ತಿತ್ತು, ಬಡವರ ಬಗ್ಗೆ ಕೇಳುವವರೇ ಇರಲಿಲ್ಲ. ಚುನಾವಣೆಯ ಸಮಯದಲ್ಲಿ ಕೊಟ್ಟ ಮಾತಿನಂತೆ ಗ್ರಾಮಸ್ಥರ ಮನೆ ಬಾಗಲಿಗೆ ಬಂದು ಭೂಮಿ ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದ ಶಾಸಕರು ದ ಕ ಜಿಲ್ಲೆಯ ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲೂ ಅಕ್ರಮ ಸಕ್ರಮ ಬೈಠಕ್ ಸಮರ್ಪಕವಾಗಿ ನಡೆಯುತ್ತಿಲ್ಲ . ಪುತ್ತೂರು ಈ ವಿಚಾರದಲ್ಲಿ ರಾಜ್ಯದಲ್ಲೇ ನಂಬರ್ ಒನ್ ಇದೆ. ಜನರ ಸಹಕಾರ ಮತ್ತು ಅಧಿಕಾರಿ ವರ್ಗದ ಉತ್ಸಾಹದಿಂದ ಇದು ಸಾಧ್ಯವಾಗಿದೆ. ಮುಂದಿನ ಪ್ರತೀ ಮಂಗಳವಾರ ಈ ಬೈಠಕ್ ನಡೆಯುತ್ತಲೇ ಇರುತ್ತದೆ ಎಂದು ಶಾಸಕರು ಹೇಳಿದರು.
ದೇವಳದ ಹೆಸರುಕೆಡಿಸುವ ಪ್ರಯತ್ನ
ನಾನು ಶಾಸಕನಾದ ಬಳಿಕ ಕ್ಷೇತ್ರದ ಸರ್ವ ಧರ್ಮದ ಆರಾಧನಾ ಕೇಂದ್ರಕ್ಕೆ ಅನುದಾನ ನೀಡಿದ್ದೇನೆ. ದೇವಸ್ಥಾನ, ಮಸೀದಿ, ಚರ್ಚು, ಬಸದಿಗಳಿಗೂ ಅನುದಾನ ನೀಡಲಾಗಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ವಿಶೇಷ ಅನುದಾನ ನೀಡಿದ್ದೇನೆ. ದೇವಸ್ಥಾನದ ಜಾಗವನ್ನು ಅಕ್ರಮ ಮಾಡಿದ್ದನ್ನು ಒತ್ತುವರಿ ಮಾಡಿ ಭೂ ಗಳ್ಳರಿಗೆ ಬಿಸಿ ಮುಟ್ಟಿಸಲಾಗಿದೆ. ದೇವಸ್ಥಾನವನ್ನು ಅಭಿವೃದ್ದಿ ಮಾಡುವುದನ್ನು ಸಹಿಸುವುದಕ್ಕೆ ಕೆಲವರಿಗೆ ಆಗುತ್ತಿಲ್ಲ. ಭಕ್ತರ ಹೆಸರಿನಲ್ಲಿ ದೇವಸ್ಥಾನದ ಹೆಸರು ಕೆಡಿಸುವ ಕೆಲಸವನ್ನು ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಮಹಾಲಿಂಗೇಶ್ವರನ ಭೂಮಿಯನ್ನು ಒಳಗೆ ಹಾಕಿದವರಿಗೆ ಇಷ್ಟು ವರ್ಷದಲ್ಲಿ ಆ ಜಾಗದ ಆರ್ ಟಿ ಸಿ ಮಾಡಲು ದೇವರು ಬಿಡಲಿಲ್ಲ ಇನ್ನು ದೇವಸ್ಥಾನವನ್ನು ಅಪಮಾನಿಸದರೆ ಬಿಡುತ್ತಾನೆಯೇ ಎಂದು ಪ್ರಶ್ನಿಸಿದ ಶಾಸಕರು ಯಾರೇ ಅಡ್ಡಬಂಧರೂ ದೇವಸ್ಥಾನವನ್ನು ಅಭಿವೃದ್ದಿ ಮಾಡಿಯೇ ಮಾಡುತ್ತೇನೆ ಎಂದು ಹೇಳಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿಯಾದ ತಹಶೀಲ್ದಾರ್ ಎಸ್ ಬಿ ಕೂಡಲಗಿ,ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಹಾಗೂ ರೂಪರೇಖಾ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಧಾಯ ನಿರೀಕ್ಷಕ ಚಂದ್ರ ಕಾರ್ಯಕ್ರಮ ನಿರೂಪಿಸಿದರು.























