ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆಗೆ ಆದ್ಯತೆ

ಬೆಳಗಾವಿ,ಡಿ. ೮-ವಿಧಾನ ಪರಿಷತ್ ಕಲಾಪದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು, ವಿಷಯಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ ಕಲಾಪದಲ್ಲಿ ಕಳೆದ ಅಧಿವೇಶನಗಳಲ್ಲಿ ಕರ್ನಾಟಕದ ಸಮಸ್ಯೆಗಳು, ವಿಷಯಗಳ ಕುರಿತು ಹೆಚ್ಚಿನ ಚರ್ಚೆ ನಡೆದಿಲ್ಲ, ಆದರೆ ಈ ಬಾರಿ ಅಧಿವೇಶನದಲ್ಲಿ ಕರ್ನಾಟಕದ ಸಮಸ್ಯೆಗಳು, ವಿಷಯಗಳ ಚರ್ಚೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಹೇಳಿದರು.


ದಕ್ಷಿಣ ಕರ್ನಾಟಕದ ಶಾಸಕರು ಉತ್ತರ ಕರ್ನಾಟಕದ ಜನರ ಸಮಸ್ಯೆ ಚರ್ಚಿಸುವುದಕ್ಕೆ ಅವಕಾಶ ನೀಡಲಾಗುವುದು ಪ್ರತಿದಿನಪ್ರಶ್ನೋತ್ತರ ಮುಗಿದ ಬಳಿಕ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ಮಾಡುತ್ತೇವೆ. ಕಳೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಉತ್ತರ ಕರ್ನಾಟಕದ ಶಾಸಕರು ಮಾತನಾಡಲಿಲ್ಲ. ದಕ್ಷಿಣ ಕರ್ನಾಟಕದ ಶಾಸಕರು ಮಾತನಾಡಿದ್ದಾರೆ. ಅದನ್ನು ಬರೆದು ಇಟ್ಟಿದ್ದೇನೆ. ಫೋನ್ ಮಾಡಿ ಎಲ್ಲಾ ಶಾಸಕರಿಗೂ ಹೇಳುತ್ತಿದ್ದೇನೆ ಎಂದು ಹೇಳಿದರು.


ಸದನದಲ್ಲಿ ಭಾಗವಹಿಸುವಂತೆ ಈಗಾಗಲೇ ೩೮ ಜನರಿಗೆ ಮಾತನಾಡಿದ್ದೇನೆ. ಉಳಿದವರ ಜೊತೆಯೂ ಮಾತನಾಡುತ್ತೇನೆ. ಎಲ್ಲರೂ ಅಧಿವೇಶನದಲ್ಲಿ ಭಾಗವಹಿಸಿ ಸದನದ ಗೌರವ ಹೆಚ್ಚಿಸಬೇಕು ಎಂದು ಹೊರಟ್ಟಿ ಮನವಿ ಮಾಡಿದರು.


ಸಭಾಪತಿ ಹುದ್ದೆಯಿಂದ ಕೆಳಗಡೆ ಇಳಿಸುವ ವಿಚಾರದ ಕುರಿತು ಮಾತನಾಡಿದ ಅವರು, ನಾನು ಒಂದು ಸಲ ಪರಿಷತ್ ಸಭಾಪತಿ ಆಗಿದ್ದೇನೆ. ಎಷ್ಟು ವರ್ಷ ಆಗಿದ್ದರೂ ಮಾಜಿ ಆಗಲೇಬೇಕು. ವಿಧಾನ ಪರಿಷತ್ ಸಭಾಪತಿ ಹುದ್ದೆ ಬಗ್ಗೆ ನಾನು ತಲೆ ಕೆಡೆಸಿಕೊಳ್ಳುವುದಿಲ್ಲ. ಸರ್ಕಾರ ಮತ್ತು ಶಾಸಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ತಿಳಿಸಿದರು.


ಸದನದಲ್ಲಿ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಮಯ ಬಂದರೆ ನಿಯಮಾವಳಿ ಪ್ರಕಾರ ನಡೆದುಕೊಳ್ಳುವೆ ಎಂದು ಹೇಳಿದರು.
ವಿಧಾನ ಪರಿಷತ್ ನ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ,೩೦ ಹುದ್ದೆಗಳನ್ನು ಕರ್ನಾಟಕ ಪರೀಕ್ಷೆ ಪ್ರಾಧಿಕಾರ,(ಕೆಇಎ) ಪರೀಕ್ಷೆ ನಡೆಸಿ ಹೆಚ್ಚು ಅಂಕಗಳಿಸಿದವರ ಪಟ್ಟಿ ನೀಡಿದ್ದು,ಅದನ್ನು ಪರಿಶೀಲನೆ ನಡೆಸಿ ಕ್ರಮಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು..