ಉತ್ತರಕಾಶಿಯಲ್ಲಿ ಮೇಘಸ್ಫೋಟ; ಪ್ರವಾಹ ಪರಿಸ್ಥಿತಿ ನಿರ್ಮಾಣ

ಉತ್ತರಕಾಶಿ.ಸೆ7: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ನೌಗಾಂವ್ ಪ್ರದೇಶದಲ್ಲಿ ಶನಿವಾರ ಸಂಜೆ ಸಂಭವಿಸಿದ ಭಾರಿ ಮೇಘಸ್ಫೋಟವು ಹಠಾತ್ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ. ಭೂಕುಸಿತದಿಂದ ಉಂಟಾದ ಅವಶೇಷಗಳು ನೌಗಾಂವ್ ಬಜಾರ್ ನಲ್ಲಿ ವ್ಯಾಪಕ ಭೀತಿಯನ್ನುಂಟುಮಾಡಿದ್ದು, ಸ್ಥಳೀಯ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಪರದಾಡುತ್ತಿದ್ದಾರೆ.


ಅವಶೇಷಗಳ ಅಡಿಯಲ್ಲಿ ಒಂದು ಮನೆ ಹೂತುಹೋಗಿದೆ. ಮಣ್ಣು ತುಂಬಿದ ನೀರು ಅರ್ಧ ಡಜನ್ ಗೂ ಹೆಚ್ಚು ಮನೆಗಳನ್ನು ಮುಳುಗಿಸಿದೆ ಎಂದು ವರದಿಗಳು ಹೇಳಿವೆ. ಈ ಘಟನೆಯಿಂದಾಗಿ ದೆಹಲಿ-ಯಮುನೋತ್ರಿ ಹೆದ್ದಾರಿಯನ್ನು ಮುಚ್ಚಲಾಗಿದ್ದು, ಈ ಪ್ರದೇಶದಲ್ಲಿ ತೀವ್ರ ಸಂಚಾರ ಅಡೆತಡೆಗಳು ಉಂಟಾಗಿವೆ.


ತ್ವರಿತ ಪರಿಹಾರ ಕಾರ್ಯಾಚರಣೆಗೆ ಸಿಎಂ ಆದೇಶ : ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಫೇಸ್ ಬುಕ್ ಪೆÇೀಸ್ಟ್ ನಲ್ಲಿ, ನೌಗಾಂವ್ ನಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಹಾನಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ತಕ್ಷಣ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರೊಂದಿಗೆ ಪರಿಹಾರ ಕಾರ್ಯಚಟುವಟಿಕೆ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಪೀಡಿತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದು, ಸಂಕಷ್ಟದಲ್ಲಿರುವವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಹೇಳಿದ್ದಾರೆ.


ಪ್ರಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ : ಯಮುನಾ ಕಣಿವೆಯ ಸೆವಾರಿ ಫಾಲ್ ಪಟ್ಟಿ ಪ್ರದೇಶದಲ್ಲಿ ಸಂಜೆ ಮೇಘಸ್ಫೋಟ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಪ್ರಶಾಂತ್ ಆರ್ಯ ಹೇಳಿದ್ದಾರೆ. ನದಿಯ ಉಬ್ಬರದಿಂದಾಗಿ ಅವಶೇಷಗಳು ಕೆಳಕ್ಕೆ ಹರಿದಿವೆ. ಇದು ತಗ್ಗು ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಜಿಲ್ಲಾಡಳಿತವು ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ತಂಡಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಬಾಧಿತ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರ್ಯ ಹೇಳಿದ್ದಾರೆ. ಸದ್ಯ ಈವರೆಗೆ ಯಾವುದೇ ಸಾವುನೋವುಗಳು ಅಥವಾ ತೀವ್ರ ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.


ಪ್ರವಾಹದಲ್ಲಿ ಹಲವು ವಾಹನಗಳು ಕೊಚ್ಚಿ ಹೋಗಿವೆ. ನೌಗಾಂವ್ ಬಜಾರ್ ಗೆ ಪ್ರವಾಹದ ನೀರು ಮತ್ತು ಅವಶೇಷಗಳು ಬರುತ್ತಿದ್ದಂತೆ ಭೀತಿಗೊಳಗಾದ ಜನರು ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ. ದೆಹಲಿ-ಯಮುನೋತ್ರಿ ಹೆದ್ದಾರಿಯನ್ನು ಮುಚ್ಚಿದ್ದರಿಂದ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನ ಹೈರಾಣಾಗಿದ್ದಾರೆ.


ಸ್ಥಳದಲ್ಲಿ ಬಿಡುಬಿಟ್ಟ ವಿಪತ್ತು ತಂಡಗಳು: ಇನ್ಸ್ ಪೆಕ್ಟರ್ ರಾಜೇಶ್ ಜೋಶಿ ನೇತೃತ್ವದ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಬಾಧಿತ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಯಶಸ್ವಿಯಾಗಿ ಸ್ಥಳಾಂತರಿಸಿವೆ.