
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.09 ಉತ್ತಮ ಸಮಾಜ ನಿರ್ಮಾಣಗೊಳ್ಳಲು ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ವಿ. ಪ್ರಜ್ಞಾ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಇಂದು ನಗರದ ಮೊಹಮ್ಮದೀಯ ಮಹಿಳಾ ಬಿ.ಇಡಿ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದಿ. ಕೆ.ವಿ. ತಿರುಪಾಲಪ್ಪ ದತ್ತಿ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು.
ಪ್ರಾಚೀನ ಕಾಲದಿಂದಲೂ ಕನ್ನಡ ಸಾಹಿತ್ಯವನ್ನು ಮೌಖಿಕವಾಗಿ ಮಹಿಳೆಯರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಶಾಲೆಯ ಮೆಟ್ಟಿಲನ್ನೇ ಏರದ ಕನ್ನಡ ಜನಪದ ಗರತಿಯರು ತಮ್ಮ ಸಾಹಿತ್ಯದಲ್ಲಿ ಚಿರಂತನ ಜೀವನ ಮೌಲ್ಯಗಳನ್ನು ಕಟ್ಟಿ ಕೊಟ್ಟಿದ್ದಾರೆ ಎಂದು ವೀರಶೈವ ಕಾಲೇಜು ಅಧ್ಯಾಪಕಿ ಡಾ. ಕೆ. ನೀಲಮ್ಮ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೋಹಮದೀಯ ಮಹಿಳಾ ಬಿ.ಇಡಿ. ಕಾಲೇಜಿನ ಕಾರ್ಯದರ್ಶಿ ಮೊಹಮ್ಮದ್ ಮುಜಂಬಿಲ್ ಅವರು ಮಾತನಾಡಿ ನಮ್ಮ ವಿದ್ಯಾ ಸಂಸ್ಥೆಯು ಮಹಿಳೆಯರಿಗಾಗಿಯೆ ಪ್ರತ್ಯೇಕ ಬಿ.ಇಡಿ. ಕಾಲೇಜನ್ನು ತೆರೆಯುವ ಮೂಲಕ ಸ್ತ್ರೀಯರಿಗೆ ಮಹತ್ವದ ಗೌರವವನ್ನು ಸಲ್ಲಿಸಿದೆ ಎಂದರು.
ಮಾಜಿ ಬೂಡಾ ಅಧ್ಯಕ್ಷ ಹುಮಾಯೂನ್ ಖಾನ್, ಸದಸ್ಯ ಹೆಚ್. ಆರ್. ಶಿವಶಂಕರ್, ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಸಂಗನಕಲ್ಲು ವಿಜಯಕುಮಾರ, ಪ್ರಾಂಶುಪಾಲರಾದ ಡಾ. ಮೈಮುದ ಬೇಗಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಯೂನಸ್ ಸ್ವಾಗತಿಸಿದರು ಉಪನ್ಯಾಸಕಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್ ವಂದಿಸಿದರು.























