
ಸಂಜೆವಾಣಿ ವಾರ್ತೆ
ಹೊಸಪೇಟೆ.ಜೂ.21 ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರು ಆರೋಗ್ಯವಂತರಾಗಿಸಲು ಯೋಗಾಭ್ಯಾಸವನ್ನು ಅನುಸರಿಸಬೇಕಾಗದ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.
ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ “ಆರೋಗ್ಯಕರ ವೃಧ್ಯಾಪಕ್ಕಾಗಿ ಯೋಗ” ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಒತ್ತಡವಿದೆ. ಮಕ್ಕಳಿಂದ ವೃದ್ದರವರೆಗೆ ಪ್ರತಿಯೊಬ್ಬರು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಇದರಿಂದ ಮುಕ್ತರಾಗಲು ಪ್ರತಿಯೊಬ್ಬರು ಪ್ರತಿದಿನ ಯೋಗ ಅಭ್ಯಾಸ ಮಾಡಬೇಕು. ಆಗ ಮಾತ್ರ ಆರೋಗ್ಯಕರ ಜೀವನ ನಡೆಸುವ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಂಪಿ ಯೋಗ ರಂಜು ಆರ್ಟ್ ತಂಡ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಯೋಗ ತಂಡದಿಂದ ವಿಶೇಷ ಯೋಗ ಪ್ರದರ್ಶನ ಮಾಡಲಾಯಿತು. ಅಲ್ಲದೆ ನೂರಾರು ಜನ ಸಾಮೂಹಿಕ ಯೋಗ ಅಭ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್ಪಿ ಜಿ.ಮಂಜುನಾಥ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಪೌರಾಯುಕ್ತ ಎರಗುಡಿ ಶಿವಕುಮಾರ್, ಆಯುಷ್ ಇಲಾಖೆಯ ಡಾ.ಮುನಿವಾಸುದೇಔರೆಡ್ಡಿ, ಸಂಚಾರಿ ಠಾಣೆ ಪಿಐ ಹುಲುಗಪ್ಪ, ಡಾ.ಎಫ್.ಟಿ.ಹಳ್ಳಿಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


































