ಉಡುಪಿ: ೧೫ ಲಕ್ಷ ಮೌಲ್ಯದ ಮಾದಕ ವಸ್ತು ನಾಶ

ಉಡುಪಿ- ದಿನಾಂಕ ೦೯/೧೦/೨೦೨೫ರಂದು ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು ೯ ಕೆಜಿ ೯೩೭ ಗ್ರಾಂ ೨೦೯ ಮಿಲಿಗ್ರಾಂ ತೂಕದ ಅಂದಾಜು ಮೌಲ್ಯ ರೂಪಾಯಿ ೭,೧೨,೯೬೩/- ಬೆಲೆಯ ಗಾಂಜಾ, ೩೪೫ ಗ್ರಾಂ ೫೯೬ ಮಿಲಿಗ್ರಾಂ ಎಂ.ಡಿ.ಎಂ.ಎ. ಅಂದಾಜು ಮೌಲ್ಯ ರೂಪಾಯಿ ೮,೦೮,೪೬೪/- ಹಾಗೂ ಮೌಲ್ಯರಹಿತ ೬೧ ಗ್ರಾಂ ೪೩೦ ಮಿಲಿಗ್ರಾಂ ಬಿಳಿ ಪೌಡರ್ನ್ನು ಪಡುಬಿದ್ರಿ ಠಾಣಾ ಸರಹದ್ದಿನ ಮೆ. ಆಯುಷ್ ಎನ್ವಿರೋಟೆಕ್ ಪ್ರೈ. ಲಿ., ಪಡುಬಿದ್ರಿ ಎಂಬಲ್ಲಿ ನಾಶಪಡಿಸಲಾಯಿತು. ನಾಶಪಡಿಸಿದ ಮಾದಕ ದ್ರವ್ಯದ ಒಟ್ಟು ಅಂದಾಜು ಮೌಲ್ಯ ರೂಪಾಯಿ ೧೫,೨೧,೪೨೭/- ಆಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷರಾದ ಹರಿರಾಮ್ ಶಂಕರ್, ಐಪಿಎಸ್, ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ಸದಸ್ಯರು ಹಾಗೂ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷಾ ಪ್ರಿಯಂವದಾ ಐ.ಪಿ.ಎಸ್. ಮತ್ತು ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ಸದಸ್ಯರಾದ ಪ್ರಭು ಡಿ.ಟಿ. ಇತರ ಪೊಲೀಸ್ ಅಧಿಕಾರಿಯವರು ಮತ್ತು ಮೆ. ಆಯುಷ್ ಎನ್ವಿರೋಟೆಕ್ ಪ್ರೈ. ಲಿ., ಪಡುಬಿದ್ರಿಯ ಅಧಿಕಾರಿಯವರು ಉಪಸ್ಥಿತರಿದ್ದರು.
ಉಡುಪಿ ನಗರ ಠಾಣೆಯ ೦೩ ಪ್ರಕರಣ, ಸೆನ್ ಠಾಣೆಯ ೨ ಪ್ರಕರಣ ಹಾಗೂ ಮಲ್ಪೆ, ಪಡುಬಿದ್ರಿ, ಶಿರ್ವಾ, ಕಾರ್ಕಳ ನಗರ ಹಾಗೂ ಮಣಿಪಾಲ ಠಾಣೆಯ ತಲಾ ೦೧ ಪ್ರಕರಣ ಸೇರಿ ಒಟ್ಟು ೧೦ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯ ಪದಾರ್ಥವನ್ನು ಮಾನ್ಯ ನ್ಯಾಯಾಲಯದ ಆದೇಶಾನುಸಾರ ನಾಶಗೊಳಿಸಲಾಗಿದೆ. ಇದರಲ್ಲಿ ೨೦೨೧ರ ೦೧ ಪ್ರಕರಣ, ೨೦೨೪ರ ೦೩ ಪ್ರಕರಣ ಹಾಗೂ ೨೦೨೫ರ ೦೬ ಪ್ರಕರಣ ಒಳಗೊಂಡಿರುತ್ತದೆ. ೨೦೨೧ರ ಪಡುಬಿದ್ರಿ ಠಾಣೆಯ ಅಪರಾಧ ಕ್ರಮಾಂಕ ೭೬/೨೦೨೧ರ ಪ್ರಕರಣವು ಸಜೆಯಲ್ಲಿ ಮುಕ್ತಾಯಗೊಂಡಿದ್ದು, ಆರೋಪಿತ ಅಬ್ದುಲ್ ರಹಿಮಾನ್ ಎಂಬಾತನಿಗೆ ಮಾನ್ಯ ನ್ಯಾಯಾಲಯವು ರೂಪಾಯಿ ೮,೦೦೦/- ಜುಲ್ಮಾನೆ ವಿಧಿಸಿ ಶಿಕ್ಷೆ ಪ್ರಕಟಿಸಿರುತ್ತದೆ. ೨೦೨೫ರ ಮಣಿಪಾಲ ಠಾಣೆಯ ಪ್ರಕರಣವು ತನಿಖೆಯಲ್ಲಿದ್ದು, ಉಳಿದ ಎಲ್ಲಾ ಪ್ರಕರಣಗಳು ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿ ಇರುತ್ತದೆ.