
ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿಗೆ ದೇಶದಲ್ಲೇ ಒಂದು ಹೆಸರಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೊಸ ಮೈಲೇಜ್ ಕೊಟ್ಟ ಜಿಲ್ಲೆಯಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಗರಸಭೆಯನ್ನು ಭಾಜಪಾ ತೆಕ್ಕೆಗೆ ತೆಗೆದುಕೊಂಡ ಜಿಲ್ಲೆ ಇದ್ದರೆ ಅದು ಉಡುಪಿ ಜಿಲ್ಲೆ. ಇಂತಹ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುವ ಸಂಘಟನಾತ್ಮಕವಾದ ಜಿಲ್ಲೆಗೆ ಸುಸಜ್ಜಿತವಾದ ಜಿಲ್ಲಾ ಪಕ್ಷದ ಕಾರ್ಯಾಲಯ ಬೇಕೆನ್ನುವ ಅದೆಷ್ಟೋ ವರ್ಷಗಳ ಕನಸು ಈಗ ನನಸಾಗುತ್ತಿದೆ. ಆದರೆ ಈಗ ಇದನ್ನು ಸಂಭ್ರಮಿಸಬೇಕೋ ಅಥವಾ ಬೇಸರಿಸಬೇಕೋ ಎನ್ನುವ ಜಿಜ್ಞಾಸೆಗೆ ಬಿದ್ದಿದ್ದೇವೆ. ವೈಯಕ್ತಿಕವಾಗಿ ಮತ್ತು ನನ್ನಂತೆ ಒಂದಷ್ಟು ಜನರ, ಒಂದಷ್ಟು ಕಾರ್ಯಕರ್ತರ ಮತ್ತು ಒಂದಷ್ಟು ಅಭಿಮಾನಿಗಳ ಬೇಸರಕ್ಕೂ ಈ ಒಂದು ಕ್ಷಣ ಕಾರಣವಾಗುತ್ತಿದೆ ಎಂದು ಹೇಳಿಕೊಳ್ಳಲು ವಿಷಾದವೆನಿಸುತ್ತಿದೆ.
ಮಾನ್ಯ ಮಾಜಿ ಶಾಸಕರಾದ ಕೆ ರಘುಪತಿ ಭಟ್ ರವರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದವರು. ಈಗ ಶಿಲಾನ್ಯಾಸಗೊಳ್ಳುತ್ತಿರುವ ಅದೇ ಜಿಲ್ಲಾ ಕಚೇರಿಯ ವ್ಯಾಪ್ತಿಯ ಭಾಜಪಾ ಸ್ಥಾನೀಯ ಸಮಿತಿಯ ಅಧ್ಯಕ್ಷರಾಗಿದ್ದವರು ಕೆ ರಘುಪತಿ ಭಟ್ ರವರು. ನಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಭಾಜಪಾ ಅಧ್ಯಕ್ಷರಾಗಿ, ಶಾಸಕರಾಗಿಯೂ ಸೇರಿದಂತೆ ಪಕ್ಷದ ವಿವಿಧ ಜವಾಬ್ದಾರಿಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದು ಪಕ್ಷವನ್ನು ಕಟ್ಟಿದವರು. ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಭಾಜಪಾ ಸರ್ಕಾರದ ಅವಧಿಯಲ್ಲಿ ಅವರನ್ನು ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿತ್ತು. ಸಚಿವರಾಗುವ ಎಲ್ಲಾ ಅರ್ಹತೆ ಇದ್ದರೂ ಕೂಡ ಸಚಿವ ಸ್ಥಾನವನ್ನು ಅವರು ಅಪೇಕ್ಷಿಸದೆ ಅಂದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನಿಲ್ ಕುಮಾರ್ ರವರನ್ನು ಬೆಂಬಲಿಸಿದ್ದರು. ಪಕ್ಷ ನಿಲ್ಲು ಎಂದಾಗ ನಿಂತು ಗೆದ್ದಿದ್ದಾರೆ, ನಿಲ್ಲಬೇಡ ಎಂದಾಗ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದಾರೆ. ಅರ್ಹತೆ ಇದ್ದರೂ ಕೂಡ ೨೦೧೩ ಹಾಗೂ ೨೦೨೩ರ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಾಗ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಾಮಾಣಿಕ ಕೆಲಸ ಮಾಡಿದ ರಾಜ್ಯದ ಅತ್ಯಂತ ಅಪರೂಪದ ರಾಜಕಾರಣಿ ಇದ್ದರೆ ಅದು ರಘುಪತಿ ಭಟ್ ಅವರು ಮಾತ್ರ.
ಕಳೆದ ಬಾರಿ ಅವರು ಶಾಸಕರಿರುವಾಗ ಜಿಲ್ಲಾ ಕಟ್ಟಡ ನಿರ್ಮಾಣ ಮಾಡಲು ಭೂಮಿ ಖರೀದಿಸಲು ಬರೋಬ್ಬರಿ ೨೫ ಲಕ್ಷ ರೂಪಾಯಿಗಳನ್ನು ನೀಡಿದ್ದರು. ಪಕ್ಷದ ಕಾರ್ಯಾಲಯ ಸದೃಢವಾಗಿ ನಿರ್ಮಾಣಗೊಳ್ಳಬೇಕೆಂಬ ಆಸೆ ರಘುಪತಿ ಭಟ್ ರವರಿಗೆ ಎಲ್ಲರಿಗಿಂತ ಹೆಚ್ಚಾಗಿಯೇ ಇತ್ತು. ಕಾಪು ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ರವರು ಕೂಡ ಸಾಲ ಮಾಡಿ ದೇಣಿಗೆ ಕೊಟ್ಟಿದ್ದರೆಂಬ ಮಾಹಿತಿಯೂ ಇದೆ. ಪಕ್ಷ ಪ್ರೇಮ ಅಷ್ಟೊಂದಿತ್ತು? ಆದರೆ ಇಂದಿನ ಬೆಳವಣಿಗೆಯಲ್ಲಿ ನಾನಾಗಲಿ, ರಘುಪತಿ ಭಟ್ ರವರಾಗಲಿ ಪಕ್ಷದಿಂದ ತಳ್ಳಲ್ಪಟ್ಟವರಾಗಿದ್ದೇವೆ. ಯಾವುದೋ ಕಾರಣದಿಂದಾಗಿ ಪಕ್ಷ ನಮ್ಮನ್ನು ಸಹಜವಾಗಿಯೇ ದೂರವಿಟ್ಟಿದೆ. ಅದರಲ್ಲೇನು ನಮಗೆ ಬೇಸರವಿಲ್ಲ. ಆದರೆ ಕನಿಷ್ಠಪಕ್ಷ ಕಚೇರಿ ಶಿಲನ್ಯಾಸಗೊಳ್ಳುವಾಗ ಸೌಜನ್ಯಕ್ಕಾದರೂ ಆಹ್ವಾನ ನೀಡಬೇಕೆಂಬ ಚಿಂತನೆ ಪಕ್ಷಕ್ಕಿರಬೇಕಿತ್ತಲ್ಲವೇ?
ಭಾಜಪದಲ್ಲಿ ಟಿಕೆಟ್ ನೀಡಿಲ್ಲವೆಂದು ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಮೋದಿ ಜಿ, ಅಮಿತ್ ಶಾ ಹಾಗೂ ಬಿಜೆಪಿಯನ್ನು ವಾಚಮಗೋಚರವಾಗಿ ನಿಂದಿಸಿದ್ದ ಜಗದೀಶ್ ಶೆಟ್ಟರ್ ರವರನ್ನು ಮತ್ತೊಮ್ಮೆ ಪಕ್ಷಕ್ಕೆ ಕರೆಸಿ ಎಂ.ಪಿ. ಟಿಕೆಟ್ ನೀಡಿ ಗೆಲ್ಲಿಸಲಾಯಿತು. ಆದರೆ ಯಾವುದೇ ಪಕ್ಷಕ್ಕೆ ಹೋಗದೆ ಪರಿವಾರದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಂಡಾಯ ಸ್ಪರ್ಧಿಸಿದ ಮಾತ್ರಕ್ಕೆ ರಘುಪತಿ ಭಟ್ ಮತ್ತು ನಮ್ಮನ್ನೆಲ್ಲ ಪಕ್ಷದಿಂದ ಉಚ್ಚಾಟಿಸಲಾಯಿತು. ಅಂದಿನ ಪಕ್ಷದ ನಿರ್ಧಾರದ ಬಗ್ಗೆ ನಮಗೇನು ತಕರಾರಿಲ್ಲ. ಆದರೆ ನಂತರದ ದಿನಗಳಲ್ಲೂ ನಮ್ಮನ್ನು ಪಕ್ಷ ಮತ್ತು ಕೆಲವರು ನಡೆಸಿಕೊಂಡ ರೀತಿಯ ಬಗ್ಗೆ ಅಪಾರ ನೋವಿದೆ. ಈಗಲೂ ನಾವು ಪರಿವಾರದ ಜೊತೆಗಿದ್ದೇವೆ. ಪರಿವಾರದ ನಿಷ್ಠಾವಂತ ಕಾರ್ಯಕರ್ತರು ನಮ್ಮ ಜೊತೆಗಿದ್ದಾರೆ. ಸಂಘ ಪರಿವಾರದ ವಿವಿಧ ಕಾರ್ಯಕ್ರಮಗಳಲ್ಲಿ ಇಂದಿಗೂ ರಘುಪತಿ ಭಟ್ ರವರು ಭಾಗವಹಿಸುತ್ತಿದ್ದಾರೆ. ಕಾರ್ಯಕರ್ತರು ಅವರ ಜೊತೆಗೆ ಎಂದೆಂದಿಗೂ ಇದ್ದಾರೆ. ಕಾರ್ಯಕರ್ತರ ಸಮಸ್ಯೆಗಳಿಗೆ ಭಟ್ರು ಈಗಲೂ ಸ್ಪಂದಿಸುತ್ತಿದ್ದಾರೆ. ಆದರೆ ಕೆಲವರು ವ್ಯವಸ್ಥಿತವಾಗಿ ನಮ್ಮನ್ನೆಲ್ಲ ದೂರವಿಡುವ ಪ್ರಯತ್ನದಲ್ಲಿದ್ದಾರೆ. ಮಾಜಿ ಶಾಸಕರು ಪಕ್ಷ ಕಟ್ಟಿದ ನಾಯಕರೆಂಬ ಕನಿಷ್ಠ ಸೌಜನ್ಯವೂ ಇಲ್ಲದೆ ಹಿರಿಯ ಕಾರ್ಯಕರ್ತನನ್ನು ಈ ಪರಿಯಾಗಿ ನಡೆಸಿಕೊಳ್ಳುವುದು ದುರಂತವಲ್ಲದೆ ಮತ್ತೇನು? ಸತ್ತಾಗಲೂ ಭಾಜಪಾ ಧ್ವಜದ ಜೊತೆಗಿರುವೆ ಎಂದಿದ್ದ ಭಟ್ರಿಗೆ ಇದೆಂತಾ ಕೊಡುಗೆ? ಪಕ್ಷವನ್ನು ಕಟ್ಟಿದ ಕಂಬಳ್ಳಿ ಸಂಜೀವ ಶೆಟ್ಟಿ, ಡಾ.ವಿ.ಎಸ್. ಆಚಾರ್ಯ, ಸೋಮಶೇಖರ್ ಭಟ್ ರಂತಹ ಅನೇಕ ಹಿರಿಯರು ಪಕ್ಷ ಕಟ್ಟಿದ ಉಡುಪಿಗೆ ಇಂತಹ ನಡೆ ಶೋಭೆಯಲ್ಲ. ಪಕ್ಷದ ಕಚೇರಿ ನಿರ್ಮಾಣಕ್ಕೆ ರಘುಪತಿ ಭಟ್ ರವರು ೨೫ ಲಕ್ಷ ನೀಡಿದ್ದಾರೆ ಎಂಬುದು ದೊಡ್ಡ ವಿಷಯವಲ್ಲ, ದೇಣಿಗೆಯ ಜೊತೆಗೆ ಸಂಘಟನೆಗಾಗಿ ಹಗಲಿರುಳು ದುಡಿದು, ವಿವಿಧ ಕಾರ್ಯಕ್ರಮಗಳ ಮೂಲಕ ಪಕ್ಷವನ್ನು ಗಟ್ಟಿಗೊಳಿಸಿದ ಕೀರ್ತಿ ರಘುಪತಿ ಭಟ್ ರವರಿಗೆ ಇದೆ ಅಲ್ಲವೇ? ಈ ವಿಚಾರಗಳು ನಾಯಕರೆಲ್ಲರಿಗೂ ಗೊತ್ತಿದೆ ಅಲ್ಲವೇ? ಹೀಗಿರುವಾಗಲೂ ಶಿಲನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರೆ ನನ್ನಂತಹ ಅನೇಕ ಕಾರ್ಯಕರ್ತರಿಗೆ ಕೊಂಚ ಸಮಾಧಾನವಾಗುತ್ತಿತ್ತು. ಪಕ್ಷ ಮತ್ತೆ ಮೊದಲಿನಂತೆ ಸಾಗುವ ಆಶಾಭಾವ ಕಾಣುತ್ತಿತ್ತು. ಆದರೆ ಪಕ್ಷ ಹಾಳಾಗಿ ಹೋದರೂ ಚಿಂತೆಯಿಲ್ಲ ಅವರು ಬರಬಾರದು ಎಂಬ ಕೆಲವೇ ಕೆಲವು ನಾಯಕರ ಅಹಂಕಾರಕ್ಕೆ ಪಕ್ಷ ಬಲಿಯಾಗುತ್ತಿದೆ. ಇಂದಿಗೂ ಅನೇಕ ಶಾಸಕರು, ಪಕ್ಷದ ನಾಯಕರು ರಘುಪತಿ ಭಟ್ ರವರನ್ನು ಬಯಸುತ್ತಿದ್ದಾರೆ. ಜಿಲ್ಲೆಯ ಶಾಸಕರು, ಪ್ರಮುಖರು ಹಾಗೂ ಅಸಂಖ್ಯ ಕಾರ್ಯಕರ್ತರು ರಘುಪತಿ ಭಟ್ ಬರಬೇಕೆನ್ನುವಾಗ ಅವರನ್ನು ದೂರ ಇಡಲು ಪ್ರಯತ್ನ ಪಡುವ ನಾಯಕನಿಗೆ ಅಷ್ಟೊಂದು ಮಹತ್ವವೇಕೆ? ಸಂಘದ ಸಿದ್ಧಾಂತ ಮೈಗೂಡಿಸಿಕೊಂಡು ಬದುಕುತ್ತಿರುವ ಮತ್ತು ರಘುಪತಿ ಭಟ್ ರವರ ಕಾರ್ಯಶೈಲಿ, ಪಕ್ಷ ಸಂಘಟನೆ ಬಗ್ಗೆ ನಿಖರ ಮಾಹಿತಿ ಇರುವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್.ಸಂತೋಷ್ ಜೀ ಹಾಗೂ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಇದರ ಬಗ್ಗೆ ಮಾಹಿತಿ ಇಲ್ಲವೇ? ಅಥವಾ ಮಾಹಿತಿ ಇದ್ದೂ ಮೌನವಾಗಿದ್ದಾರೆಯೇ? ಪಕ್ಷದ ಏಳಿಗೆಗಾಗಿ ಕೆಲಸ ಮಾಡುವ ಅಂತಹಾ ನಾಯಕರೇ ಮೌನವಾದರೆ ಮುಂದಿನ ದಿನಗಳಲ್ಲಿ ಪಕ್ಷದ ಕಥೆ ಏನು?
ನೂರಕ್ಕೆ ನೂರರಷ್ಟು ನಾವು ಪರಿವಾರದಿಂದ, ಪಕ್ಷದಿಂದ ಭಾವನಾತ್ಮಕವಾಗಿ ದೂರವಾಗಿಲ್ಲ. ಆದರೆ ನಮ್ಮನ್ನು ದೂರ ಇಡಬೇಕೆನ್ನುವ ಷಡ್ಯಂತ್ರ ಮಾಡುತ್ತಿದ್ದರೆ ನಾವೇನು ಮಾಡಲು ಸಾಧ್ಯ. ಈಗಾಗಲೇ ಯಾವುದೇ ವಿಶೇಷ ಕಾರ್ಯಕ್ರಮಗಳಿಲ್ಲದೆ ಉಡುಪಿ ವಿಧಾನಸಭಾ ಕ್ಷೇತ್ರದ ಪಕ್ಷ ಸಂಘಟನೆ ಸೊರಗುತ್ತಿದೆ. ನಿರ್ಧಾರ ಹಿರಿಯರಿಗೆ ಬಿಟ್ಟಿದ್ದು.
ಇದೆಲ್ಲಾ ಹಲವಾರು ದಿನಗಳಿಂದ ನಮ್ಮೊಳಗೆ ಕಾಡಿದ ಬೇಸರದ ನುಡಿಗಳನ್ನು ಹೊರತರುವ ಪ್ರಯತ್ನ ಮಾಡಿದೆ ಅಷ್ಟೇ. ನಾವೇನಾದರೂ ಮಾತಾಡಿದರೆ ಪಕ್ಷ ಸಂಘಟನೆ ಧಕ್ಕೆಯಾಗಬಹುದೆಂದು ಈವರೆಗೂ ತುಟಿ ಬಿಚ್ಚಿಲ್ಲ. ಆದರೆ ಭಾಜಪಾ ಎಂದರೆ ಮಾತೃ ಸಮಾನ. ಭಾಜಪಾ ಕಛೇರಿ ಎಂದರೆ ನಮ್ಮ ಮನೆ ಎಂಬ ಭಾವನೆ. ಈಗ ಆ ಮನೆಯ ಶಿಲಾನ್ಯಾಸ ನಡೆಯುತ್ತಿದೆ. ಮನಃಪೂರ್ವಕವಾಗಿ ಈ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸುತ್ತೇವೆ. ಈ ಕಛೇರಿಯಿಂದ ಪಕ್ಷ ಮತ್ತಷ್ಟು ಬಲಿಷ್ಠವಾಗಲಿ. ಇದರ ಅಡಿಯಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಭಗವಂತನು ಶಕ್ತಿಯನ್ನು ಕರುಣಿಸಲಿ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಉದಾತ್ತ ಗುಣಗಳನ್ನು ಈ ಕಛೇರಿಯಿಂದ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದು ಮಹೇಶ್ ಠಾಕೂರ್, ಮಾಜಿ ಅಧ್ಯಕ್ಷರು ಉಡುಪಿ ನಗರ ಬಿಜೆಪಿ, ಉಡುಪಿ ನಗರಸಭಾ ಮಾಜಿ ಸದಸ್ಯರು ಫೆಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

































