ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.12 : ನಗರದ ಮುಂಡ್ರಿಗಿ ಸಮೀಪದ ಮಹಾತ್ಮಾ ಗಾಂಧಿ ಲೇಔಟ್ ನಲ್ಲಿ ರಾಜೀವ್ ಗಾಂಧಿ ಟೌನ್’ಶಿಪ್ ಯೋಜನೆಯಡಿ ನಿರ್ಮಿಸಿರುವ 1000 ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಶಾಸಕ ನಾರಾ ಭರತ್ ಹೇಳಿದ್ದಾರೆ.
ನಿನ್ನೆ ಈ ವಸತಿ ಸಮುಚ್ಛಯಕ್ಕೆ ಪಾಲಿಕೆ ಆಯುಕ್ತ ಮಂಜುನಾಥ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆ ಪಡೆಯಲು ಈಗಾಗಲೇ ಹಲವು ಫಲಾನುಭವಿಗಳು ಸರ್ಕಾರ ನಿಗದಿ ಮಾಡಿದ್ದ ತಮ್ಮ ಪಾಲಿನ ಹಣವನ್ನು ಸಂದಾಯ ಮಾಡಿದ್ದಾರೆ, ಆದರೆ ಮನೆಗಳನ್ನು ಫಲಾನುಭವಿಗಳಿಗೆ ಉಚಿತವಾಗಿ ನೀಡಲು ವಸತಿ ಸಚಿವ ಜಮೀರ್ ಅಹ್ಮದ್ ಅವರೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರವೇ ಫಲಾನುಭವಿಗಳ ಹಣವನ್ನು ಕಟ್ಟಿ, ಶೇ.100ರಷ್ಟು ಉಚಿತವಾಗಿ ಪ್ರಾಥಮಿಕ ಹಂತದಲ್ಲಿ 1000 ಮನೆಗಳನ್ನು ಏಕ ಕಾಲಕ್ಕೆ ಹಂಚಿಕೆ ಮಾಡುವ ಯೋಚನೆ ಇದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ಆಗಮಿಸಿ ಮನೆ ವಿತರಣೆ ಮಾಡಲಿದ್ದಾರೆಂದು ಹೇಳಿದ್ದಾರೆ.
ಈಗ ಇಲ್ಲಿ ಜಿ ಪ್ಲಸ್ 2 ಮಾದರಿಯಲ್ಲಿ 230 ಮನೆಗಳು ಪೂರ್ಣಗೊಂಡಿವೆ. ಇನ್ನುಳಿದ 410 ಮನೆಗಳು ಪೂರ್ಣಗೊಂಡಿದ್ದು ಸಣ್ಣ ಪುಟ್ಟ ಕಾಮಗಾರಿ ಇದ್ದು ಈ ತಿಂಗಳ ಅಂತ್ಯದಲ್ಲಿ ಮುಗಿಯಲಿದೆ. ಇನ್ನುಳಿದಂತೆ 400 ಮನೆಗಳನ್ನು ನಿರ್ಮಾಣ ಮಾಡಿದ್ದು ಅವುಗಳು ಬರುವ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆಯಂತೆ.






















