ನವದೆಹಲಿ,ಸೆ.5:- ಉಕ್ರೇನ್-ರಷ್ಯಾಯುದ್ಧ ಕೊನೆಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕು ಎಂದು ಯುರೋಪಿಯನ್ ಒಕ್ಕೂಟದ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಮನವಿ ಮಾಡಿದ್ದಾರೆ.
ಭಾರತ-ಯುರೋಪಿಯನ್ ಒಕ್ಕೂಟದ ಸಂಬಂಧ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ದೂರವಾಣಿ ಮಾತುಕತೆಯಲ್ಲಿ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೆ ನಡೆದ ಜಂಟಿ ಸಭೆಯಲ್ಲಿ ವ್ಯಾಪಾರ, ಭದ್ರತೆ ಮತ್ತು ಉಕ್ರೇನ್ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಮುಂದಿನ ಶೃಂಗಸಭೆಗೆ ಭಾರತಕ್ಕೆ ಬರುವಂತೆ ಯುರೋಪಿಯನ್ ಒಕ್ಕೂಟದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಆಹ್ವಾನ ನೀಡಿದ್ದಾರೆ.
ಭಾರತ-ಯುರೋಪಿಯನ್ ಒಕ್ಕೂಟದ ಕಾರ್ಯತಂತ್ರದ ಪಾಲುದಾರಿಕೆ ಬಲಪಡಿಸುವ ತಮ್ಮ ಬದ್ಧತೆಯನ್ನು ಇದೇ ವೇಳೆ ಉಭಯ ಕಡೆಯ ನಾಯಕರು ಪುನರುಚ್ಚರಿಸಿದ್ದು ವ್ಯಾಪಾರ, ತಂತ್ರಜ್ಞಾನ, ಹೂಡಿಕೆ, ನಾವೀನ್ಯತೆ, ಸುಸ್ಥಿರತೆ, ರಕ್ಷಣೆ, ಭದ್ರತೆ ಮತ್ತು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಎರಡೂ ಕಡೆಯ ನಾಯಕರು ಸ್ವಾಗತಿಸಿದ್ದಾರೆ. ಭಾರತ-ಯುರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ ಆರಂಭಿಕ ತೀರ್ಮಾನ ಮತ್ತು ಐಎಂಇಇಸಿ ಕಾರಿಡಾರ್ ಅನುಷ್ಠಾನದ ಬದ್ಧತೆಯ ಬಗ್ಗೆ ನಾಯಕರು ಪುನರುಚ್ಚರಿಸಿದ್ದಾರೆ.
ಉಕ್ರೇನ್‍ನಲ್ಲಿನ ಯುದ್ಧ ಜಾಗತಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಒತ್ತಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು”ರಷ್ಯಾ ತನ್ನ ಆಕ್ರಮಣಕಾರಿ ಯುದ್ಧ ಕೊನೆಗೊಳಿಸಲು ಮತ್ತು ಶಾಂತಿಯತ್ತ ಸಾಗಲು ಸಹಾಯ ಮಾಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ಯುದ್ಧ ಜಾಗತಿಕ ಭದ್ರತಾ ಪರಿಣಾಮ ಬೀರುತ್ತದೆ ಮತ್ತು ಆರ್ಥಿಕ ಸ್ಥಿರತೆ ದುರ್ಬಲಗೊಳಿಸುತ್ತದೆ. ಆದ್ದರಿಂದ ಇದು ಇಡೀ ಜಗತ್ತಿಗೆ ಅಪಾಯವಾಗಿದೆ”. ಹೀಗಾಗಿ ಯುದ್ದ ಕೊನೆಯಾಗಬೇಕಾಗಿದೆ ಎಂದಿದ್ದಾರೆ.

























