ಉಂಡ ಮನೆಗೆ ಕಲ್ಲು ಹೊಡೆಯುವ ವಿಶ್ವನಾಥ್: ಶಿವಣ್ಣ

ಸಂಜೆವಾಣಿ ನ್ಯೂಸ್
ಮೈಸೂರು:ಸೆ.19:-
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಉಂಡ ಮನೆಗೆ ದ್ರೋಹ ಬಗೆಯುವ ಮತ್ತು ಕಲ್ಲು ಹೊಡೆಯುವ ಮನಃಸ್ಥಿತಿ ಉಳ್ಳವರು, ಪ್ರಚಾರದ ಚಟ ಜಾಸ್ತಿ, ಸಿದ್ದರಾಮಯ್ಯರನ್ನು ಟೀಕಿಸಿದರೆ ದೊಡ್ಡ ವ್ಯಕ್ತಿ ಆಗುತ್ತೇನೆ ಎಂಬ ಭ್ರಮೆ ಅವರಿಗಿದೆ, ಅವರ ಮಾತಿಗೆ ಸಮುದಾಯದಲ್ಲಿ ಯಾವುದೇ ಮಹತ್ವ ಇಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮುಖಂಡರಾದ ಶಿವಣ್ಣ ಹೇಳಿದರು.


ಇತ್ತೀಚೆಗೆ ವಿಶ್ವನಾಥ್ ಅವರು ಸುದ್ದಿಗೋಷ್ಠಿ ನಡೆಸಿ ಕಾಗಿನೆಲೆ ಪೀಠದ ಗುರುಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆ ನಡೆಸಿದ್ದಕ್ಕೆ ಪ್ರತಿಯಾಗಿ ಗುರುವಾರ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಶ್ವನಾಥ್ ಅವರನ್ನು ಇದುವರೆಗೂ ಒಬ್ಬ ಮುತ್ಸದಿ ರಾಜಕಾರಣಿ ಎಂದು ಕೊಂಡಿದ್ದೆವು, ಅವರು ಒಬ್ಬ ನಾಲಾಯಕ್ ರಾಜಕಾರಣಿಯಾಗಿದ್ದಾರೆ. ಪಕ್ಷಾಂತರ ಪಕ್ಷಿ, ಯಾವುದೇ ಪಕ್ಷಕ್ಕೆ ಹೋದರೂ ಅವರು ಅಲ್ಲಿ ಉಳಿಯುವುದಿಲ್ಲ, ಪಕ್ಷದ್ರೋಹ ಮಾಡಿ ಹೊರಬರುತ್ತಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟೀಕಿಸಿ ಮಾತನಾಡಿದರೆ ದೊಡ್ಡ ವ್ಯಕ್ತಿ ಆಗುತ್ತೇನೆ ಎಂಬ ಭ್ರಮೆ ಅವರಲ್ಲಿದೆ, ಸಮುದಾಯದಲ್ಲಿ ಅವರಿಗೆ ಕಿಂಚಿತ್ತು ಬೆಲೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈತ ಸ್ವಾಭಿಮಾನ ಕಳೆದುಕೊಂಡಿದ್ದಾರೆ, ವಿಶ್ವನಾಥ್ ಅವರು ಯಾವತ್ತೂ ಕೂಡ ಉಂಡ ಮನೆಗೆ ಉಪಕಾರ ಮಾಡಿದವರಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡುಕಂಡ ಅಪರೂಪದ ಜನನಾಯಕರು, ಇವರ ಯೋಜನೆಗಳು ವಿಶ್ವಕೀರ್ತಿ ತಂದಿವೆ, ನಾಡಿನ ಜನರು ಸುಭೀಕ್ಷವಾಗಿದ್ದಾರೆ, ಇದನ್ನು ಸಹಿಸದ ವಿಶ್ವನಾಥ್ ಪದೇ ಪದೇ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡುತ್ತಾ ಈಗ ನಮ್ಮ ಸಮುದಾಯದ ಸ್ವಾಮೀಜಿ ವಿರುದ್ಧವೂ ಟೀಕೆಗೆ ಮುಂದಾಗಿರುವುದು ಸರಿಯಲ್ಲ, ಕುರುಬ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು ಎಂದು ಸ್ಪಷ್ಟಪಡಿಸಿ ಎಂದರು.


ನಿಮ್ಮದು ಬರೀ ಟೀಕೆ ಮಾಡುವ ಕೆಲಸ, ಸಿದ್ದರಾಮಯ್ಯ ಅವರು ನಿಮಗೆ ಸಹಾಯ ಮಾಡಿದ್ದನ್ನು ಸ್ವಲ್ಪ ನೆನಪಿಸಿಕೊಳ್ಳಿ, ನೀವಿಗ ರಾಜಕೀಯ ಸಂಧ್ಯಾಕಾಲದಲ್ಲಿದ್ದಿರಿ, ನಿಮ್ಮ ಕುಟುಂಬದ ಯಾರಿಗಾದರೂ ರಾಜಕೀಯವಾಗಿ ಬೆಳೆಸಿ, ಅದನ್ನು ಬಿಟ್ಟು ಪದೇ ಪದೇ ಸಿದ್ದರಾಮಯ್ಯರನ್ನು ಟೀಕೆ ಮಾಡಿದರೆ ನಿಮಗೆ ಏನೂ ಸಿಗುವುದಿಲ್ಲ ಎಂದರು.


ಕುರುಬ ಸಮುದಾಯಕ್ಕೆ ನಿಮ್ಮ ಕೊಡುಗೆ ಏನೂ ಇಲ್ಲ, ಮಠವನ್ನೂ ನೀವೊಬ್ಬರೇ ಕಟ್ಟಿಲ್ಲ, ಸಮುದಾಯದ ಎಲ್ಲರ ಕೊಡುಗೆ ಇದೆ, ಸ್ವಾಮೀಜಿಗಳಿಗೆ ಧಮಕಿ ಹಾಕುವುದನ್ನು ಬಿಡಿ, ಸ್ವಾಮೀಜಿಗಳು ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.


ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಗೋಪಿ, ಮುಖಂಡರಾದ ದೊಳ್ಳೇಗೌಡ, ಪರಮೇಶ್, ರಾಘವೇಂದ್ರ, ಕೆಂಚಪ್ಪ, ಮಹೇಶ್, ಲೋಕೇಶ್, ಕಾಳಪ್ಪ ಇತರರು ಇದ್ದರು.