ಈಶ್ವರ ದೇವರಿಗೆ ಕದಿರುಬೆಳೆಯುವ ತಾಣವಾಗಬೇಕು

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಳದ ಪರಿಸರದಲ್ಲಿ ನಿರ್ಮಿತವಾದ ಸಭಾಭವನ ಉದ್ದೇಶದ ಈಡೇರಿಕೆಯ ಬದಲಿಗೆ ಭಾದೆಯಾಗಿ ಪರಿಣಮಿಸಿದೆ. ಈ ಸಭಾಭವನ ಜಾಗದಲ್ಲಿ ಈಶ್ವರ ದೇವರ ಕ್ರಿಯೆಗಳು ನಡೆಯುತ್ತಿತ್ತು. ಈ ಸಾನಿಧ್ಯಕ್ಕೂ ಸ್ಥಳಕ್ಕೂ ಅವಿನಾಭಾವ ಸಂಬಂಧ ಇದೆ. ಕದಿರುಕಟ್ಟುವ ವ್ಯವಸ್ಥೆಗೆ ಬೇಕಾದ ಆರಾಧನಾ ವಿಧಿಗಳು ಇಲ್ಲಿ ನಡೆಯುತ್ತಿತ್ತು. ಹಾಗಾಗಿ ಈ ಜಾಗ ಗದ್ದೆಯಾಗಿ ಪರಿವರ್ತಿತಗೊಳ್ಳಬೇಕು ಎಂದು ವಿಚಾರ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ.
ಮಂಗಳವಾರ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ, ಅಯ್ಯಪ್ಪ ಗುಡಿ, ನಾಗನ ಗುಡಿ ಮತ್ತು ನವಗ್ರಹ ಗುಡಿ ತೆರವು ಮಾಡುವ ವಿಚಾರದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ನಡೆಯಿತು.
ಸಭಾಭವನದ ಸಂಪತ್ತು ದೇವರಿಗೆ ವಿಷದ ಅನುಭವವಾಗುತ್ತಿದೆ. ಸಭಾಭವನವನ್ನು ಇಟ್ಟುಕೊಳ್ಳುವ ಮನಸ್ಥಿತಿ ದೇವರಿಗಿಲ್ಲ. ಇದನ್ನು ತೆಗೆಯುವುದರಿಂದ ಯಾವುದೇ ಸಂಪತ್ತು ನಷ್ವಾಗುವುದಿಲ್ಲ. ಈ ಜಾಗದಲ್ಲಿ ಬೆಳೆಯುವ ತೆನೆ ಈಶ್ವರ ದೇವರಿಗೆ ಚಿನ್ನವಾಗಿದೆ ಎಂಬುವುದು ಚಿಂತನೆಯಲ್ಲಿ ಸ್ಪಷ್ಟತೆ ಪಡೆದಿದೆ.
ಕಾಪು ಮಾರಿಯಮ್ಮ ದೇವಸ್ಥಾನದ ಕುಮಾರ ಗುರು ತಂತ್ರಿ ನೇತೃತ್ವದಲ್ಲಿ ಪ್ರಶ್ನಾಚಿಂತನೆ ನಡೆಯಿತು.
ಆರೋಢ ರಾಶಿಯಾಗಿ ವೃಶ್ಚಿಕ ಬಂದಿದೆ. ತಾಂಬೂಲ ಸಂಖ್ಯೆ ೬ ಆಗಿತ್ತು. ಸಭಾಭವನ ಇರುವ ಭಾಗದಲ್ಲಿ ಗದ್ದೆ ಮಾಡಿ ಉಳಿದ ಜಾಗದಲ್ಲಿ ಅಭಿವೃದ್ಧಿ ಮಾಡುವ ವಿಚಾರದಲ್ಲಿ ನಿವೃತ್ತ ರಾಶಿ ಬಂದಿರುವುದಿಲ್ಲ. ಬಳಿಕ ದೇವಸ್ಥಾನದ ಮುಂಭಾಗದ ಸಂಪೂರ್ಣ ಜಾಗವನ್ನು ಗದ್ದೆಯಾಗಿ ಉಳಿಸಿಕೊಳ್ಳುವ ಸಂಕಲ್ಪ ಮಾಡಿದಾಗ ನಿವೃತ್ತಿ ರಾಶಿಯಾಗಿ ಮೇಷ ಬಂದಿದೆ. ಭಕ್ತರು ವಿವಿಧ ಜಿಜ್ಞಾಸೆಗಳನ್ನು ಮುಂದಿಟ್ಟು ಉತ್ತರ ಪಡೆದುಕೊಳ್ಳುವ ಕಾರ್ಯವಾಯಿತು.
ಅರ್ಚಕ ವಸಂತ ಕೆದಿಲಾಯ, ಶಾಸಕ ಅಶೋಕ್ ಕುಮಾರ್ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಕುಮಾರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ನಳಿನಿ ಪಿ. ಶೆಟ್ಟಿ, ಎನ್. ಕೆ. ಜಗನ್ನಿವಾಸ ರಾವ್, ಕೇಶವ ಪ್ರಸಾದ್ ಮುಳಿಯ ಮತ್ತಿತರರು ಉಪಸ್ಥಿತರಿದ್ದರು.
ಸ್ಪಷ್ಟತೆಯ ಉಲ್ಲೇಖವಾಗಿದೆ
ಮಹಾಲಿಂಗೇಶ್ವರ ದೇವರ ಎದುರುಭಾಗದ ಗದ್ದೆಯಲ್ಲಿರುವ ಸಭಾಭವನ ತೆರವು ಬಹುಚರ್ಚಿತ ವಿಚಾರಬಾಗಿ ಹಲವಾರು ವರ್ಷಗಳಿಂದ ಇದೆ. ಈ ಹಿಂದೆ ಎರಡು ಪ್ರಶ್ನಾಚಿಂತನೆಗಳನ್ನು ನಡೆಸಿದಾಗಲೂ ಈ ಸಭಾಭವನ ದೇವರಿಗೆ ಸಮಾಧಾನ ಇಲ್ಲ. ಇದನ್ನು ತೆರವುಗೊಳಿಸಬೇಕು ಎಂಬುವುದು ಉಲ್ಲೇಖವಾಗಿದೆ. ಆದರೆ ಭಕ್ತಾಧಿಗಳಲ್ಲಿ ಇದೊಂದು ಗೊಂದಲ ಸೃಷ್ಟಿಯಾಗಿತ್ತು. ಆದರೆ ಇಂದು ನಡೆದ ಈ ಪ್ರಶ್ನಾಚಿಂತನೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಸಭಾಭವನದ ತೆರವು ಮಾಡುವುದರಿಂದ ದೇವರಿಗೆ ತೃಪ್ತಿಯಾಗುತ್ತದೆ ಎಂಬ ಸಂದೇಶ ಉಲ್ಲೇಖವಾಗಿದೆ. ಹಾಗಾಗಿ ನಾವೊಂದು ನಿರ್ಣಯ ಕೈಗೊಂಡಿದ್ದೇವೆ. ಸಭಾಭವನವನ್ನು ತೆರವು ಮಾಡಿ ಮುಂದಿನ ದಿನಗಳಲ್ಲಿ ಇಲ್ಲಿ ದೇವರಿಗೆ ಪ್ರೀಯವಾದ ಗದ್ದೆಯನ್ನು ಮಾಡಲು ತೀರ್ಮಾನಿಸಿದ್ದೇವೆ- ಅಶೋಕ್ ರೈ ಶಾಸಕರು.