
ಸಂಜೆವಾಣಿ ವಾರ್ತೆ
ಹೊಸಪೇಟೆ.ಜೂ.9 ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಈಡಿಗ ಸಮುದಾಯಕ್ಕೆ ಸೇರಿದ ಸ್ಥಳೀಯ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಆರ್.ಗವಿಯಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರವಿಕುಮಾರ್, ಒತ್ತಾಯಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿಂದು ಜರುಗಿದ ಪತ್ರಿಕಾ ಗೋಷ್ಠೀಯಲ್ಲಿ ಮಾತನಾಡಿದ ಅವರು. ಶಾಸಕ ಎಚ್.ಆರ್. ಗವಿಯಪ್ಪ ಅವರು ಜಿಲ್ಲೆಯ ಎಲ್ಲಾ ಸಮಾಜಗಳನ್ನು ಒಗ್ಗೂಡಿಸಿ ಕೊಂಡೊಯ್ಯುವ ಸಮರ್ಥ ನಾಯಕರಾಗಿದ್ದಾರೆ. ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದ್ದರಿಂದ ಹೈಕಮಾಂಡ್ ತಕ್ಷಣವೇ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಮಾತನಾಡಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಇಲ್ಲಿ ಗವಿಯಪ್ಪ ಅವರ ಮನೆಯಲ್ಲಿ ಹತ್ತು ದಿನಗಳ ಕಾಲ ಉಳಿದುಕೊಂಡಿದ್ದರು. ಗಾಂಧಿ ಕುಟುಂಬ ಹಾಗೂ ಹೆಚ್.ಆರ್.ಜಿ ಕುಟುಂಬದ ನಡುವೆ ಉತ್ತಮ ಬಾಂಧವ್ಯವಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಡಿಗ ಸಮುದಾಯದವರನ್ನು ರಾಜಕೀಯವಾಗಿ ಗುರುತಿಸಬೇಕು. ಸಚಿವ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. 1952ರಲ್ಲಿ ಮಾಜಿ ಶಾಸಕ ನಾಗನಗೌಡರು ಸಚಿವರಾಗಿದ್ದು ಬಿಟ್ಟರೆ, ಈ ವರೆಗೆ ಕಾಂಗ್ರೆಸ್ ನಿಂದ ಇಲ್ಲಿ ಸಚಿವರಾಗಿಲ್ಲ. ಆದ್ದರಿಂದ ಅನುಭವಿ ಶಾಸಕ ಹೆಚ್.ಆರ್.ಗವಿಯಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಗಿಂಜಿ ಮಂಜುನಾಥ ಮುಖಂಡರಾದ ಹಾಲಪ್ಪ, ಎರ್ರಿಸ್ವಾಮಿ, ಯು.ಪಂಪಾಪತಿ, ಎಸ್.ಅಂಜಿನಪ್ಪ, ಗುಂಡಿ ರಾಘವೇಂದ್ರ, ಪ್ರಮೋದ್ ಪುಣ್ಯಮೂರ್ತಿ ಇದ್ದರು.





























