ಇ-ಖಾತ ಸಮಸ್ಯೆ ಇತ್ಯರ್ಥಕ್ಕೆ ವಾರದ ಗಡುವು ನೀಡಿದ ಮಾಜಿ ಮಹಾಪೌರ

ಸಂಜೆವಾಣಿ ನ್ಯೂಸ್
ಮೈಸೂರು.ಫೆ.04:-
ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ಮಾಡಿಸಲು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಜನರನ್ನು ಪರೋಕ್ಷವಾಗಿ ತಪ್ಪು ದಾರಿಗೆ ತಳ್ಳುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ವಾರದಲ್ಲಿ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಮಾಜಿ ಮಹಾಪೌರ ಶಿವಕುಮಾರ್ ಕಿಡಿಕಾರಿದರು.


ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಇ-ಖಾತಾ ಮಾಡಿಸಿಕೊಳ್ಳಲು ಸಾಧ್ಯವಾಗದೆ ಜನರು ಪರದಾಡುವಂತಾಗಿದೆ. ಸ್ವತಃ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲೇ ಸಮಸ್ಯೆ ಬಗೆಹರಿಯದಿರುವುದು ದುರಂತ. ಇ-ಖಾತಾ ವ್ಯವಸ್ಥೆ ಸಂಪೂರ್ಣ ಗೊಂದಲಗೊಂಡಿದ್ದು, ಇದನ್ನು ಜಾರಿಗೆ ತರುವ ಮೊದಲು ಮನೆಮನೆಗೆ ತೆರಳಿ ಸಮಗ್ರ ಸರ್ವೇ ನಡೆಸಬೇಕಿತ್ತು. ಎಲ್ಲಾ ಆಸ್ತಿಗಳ ಡೇಟಾ ಸಂಗ್ರಹಣೆ ಬಳಿಕವೇ ಇ-ಖಾತಾ ಕಡ್ಡಾಯಗೊಳಿಸಬೇಕಾಗಿತ್ತು. ಆದರೆ, ಯಾವುದೇ ಪೂರ್ವಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಇ-ಖಾತಾ ಜಾರಿಗೊಳಿಸಲಾಗಿದೆ ಎಂದರು. ಇ-ಖಾತಾ ಸಮಸ್ಯೆಯಿಂದಾಗಿ ಆಸ್ತಿ ಮಾರಾಟ-ಖರೀದಿ ಸ್ಥಗಿತಗೊಂಡಿದ್ದು, ಜನರು ಕೋರ್ಟ್‍ಗಳು ಹಾಗೂ ಸರ್ಕಾರಿ ಕಚೇರಿಗಳ ಸುತ್ತಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವೆಬ್‍ಸೈಟ್ ನಲ್ಲಿ ಸ್ಪಷ್ಟ ಮಾಹಿತಿ ಲಭ್ಯವಿಲ್ಲದ ಕಾರಣ ಜನರು ಮಧ್ಯವರ್ತಿಗಳ ಬಳಿ ಹೋಗಬೇಕಾದ ಸ್ಥಿತಿ ಉಂಟಾಗಿದ್ದು, ಅಲ್ಲಿ ಹಣ ಸುಲಿಗೆ ನಡೆಯುತ್ತಿದೆ. ಬೇರೆ ರಾಜ್ಯಗಳಲ್ಲಿ ಎಐ ತಂತ್ರಜ್ಞಾನ ಬಳಸಿ ಸುಗಮವಾಗಿ ಸೇವೆ ಒದಗಿಸಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ `ಕಣಜ’ ಎಂಬ ಸಾಫ್ಟ್‍ವೇರ್ ಮೂಲಕ ಜನರಿಗೆ ಗೊಂದಲ ಸೃಷ್ಟಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆಗೆ ವರ್ಷಕ್ಕೆ ಸುಮಾರು 200 ಕೋಟಿ ಕಂದಾಯ ವಸೂಲಿ ಆಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಜನರು ತೆರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.


ಐಟಿಬಿಟಿ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ದೇಶ ರಾಜಕಾರಣದ ಬಗ್ಗೆ ಸದಾ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಾರೆ. ಆದರೆ, ಅವರದೇ ಇಲಾಖೆಯಲ್ಲಿನ ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಆನ್‍ಲೈನ್ ವ್ಯವಸ್ಥೆ ಕೆಟ್ಟಿದೆ.


ಈ ಬಗ್ಗೆ ಯಾಕೆ ಅವರು ಹಿನ್ನಡೆ ಅನುಭವಿಸುತ್ತಿದ್ದಾರೆ. ಮುಂಬೈ, ಇಂದೋರ್, ಹೈದರಾಬಾದ್, ಅಹಮದ ಬಾದ್ ನಲ್ಲಿ ವಾಟ್ಸಾಪ್ ನಲ್ಲಿ ಖಾತೆ ಪಡೆದುಕೊಳ್ಳುತ್ತಿದ್ದಾರೆ. ಯಾವುದೇ ಸರ್ವೇ ಪೂರ್ಣವಾಗಿ ನಡೆಸದೇ ಏಕಾಎಕಿ ಜಾರಿಗೊಳಿಸಿ ಸಾರ್ವಜನಿಕರಿಗೆ ಗೊಂದಲದ ಗೂಡನ್ನಾಗಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವೈಫಲ್ಯದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಇ-ಖಾತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು. ಇ-ಖಾತಾ ಕಡ್ಡಾಯ ನಿಯಮವನ್ನು ಹಿಂಪಡೆಯಬೇಕು.
ಒಂದು ವಾರದೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಗರಪಾಲಿಕೆ ಮಾಜಿ ಸದಸ್ಯರಾದ ಬಿ.ವಿ.ಮಂಜುನಾಥ್, ಎಂ.ಯು.ಸುಬ್ಬಯ್ಯ ಇನ್ನಿತರರು ಉಪಸ್ಥಿತರಿದ್ದರು.