ಇಸ್ಲಾಮಿಕ್ ಸಿದ್ಧಾಂತ ಹರಡಲು ಯೂನಸ್ ಯತ್ನ: ಹಸಿನಾ ಆರೋಪ

ನವದೆಹಲಿ, ನ.8- ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಇಸ್ಲಾಮಿಸ್ಟ್ ಗುಂಪುಗಳು ತನ್ನ ಸಿದ್ಧಾಂತ ಹರಡಲು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವಕಾಶ ನೀಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.


ಮುಹಮ್ಮದ್ ಯೂನಸ್ ಅವರಿಗೆ ಆಡಳಿತದ ಮೇಲೆ ನಿಯಂತ್ರಣವಿಲ್ಲ ಮತ್ತು ಉಗ್ರಗಾಮಿ ಸಿದ್ಧಾಂತ ಹರಡುವ ಭಯೋತ್ಪಾದಕ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ನಿಯತಕಾಲಿಕಕ್ಕೆ ಬರೆದ ಲೇಖನದಲ್ಲಿ 2024ರ ಆಗಸ್ಟ್ ತಿಂಗಳಲ್ಲಿ ಸರ್ಕಾರದ ಪತನದ ನಂತರ ಭಾರತದಲ್ಲಿ ವಾಸಿಸುತ್ತಿರುವ ಶೇಖ್ ಹಸೀನಾ, ಮಹಮ್ಮದ್ ಯೂನಸ್ ಅವರು ಅವಾಮಿ ಲೀಗ್ ಅನ್ನು ನಿಷೇಧಿಸಿದ್ದಾರೆ, ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದ್ದಾರೆ ಮತ್ತು ಸರ್ವಾಧಿಕಾರಿ ಆಡಳಿತವನ್ನು ಕಾನೂನುಬದ್ಧಗೊಳಿಸುವ ಗುರಿ ಹೊಂದಿದೆ ಎಂದಿದ್ದಾರೆ. ಹಿಜ್ಬ್ ಉತ್-ತಹ್ರಿರ್ ನಂತಹ ಉಗ್ರಗಾಮಿ ಗುಂಪುಗಳು ತಮ್ಮ ಸಿದ್ದಾಂತ ಹರಡುತ್ತಿವೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಸ್ಥಳೀಯ ಸಮುದಾಯಗಳ ಮೇಲಿನ ದಾಳಿಗಳು ತೀವ್ರವಾಗಿ ಹೆಚ್ಚಿವೆ ಎಂದು ಬಾಂಗ್ಲಾ ದೇಶದ ಮದ್ಯಂತರ ಸರ್ಕಾರದ ವಿರುದ್ದ ನೇರ ಆರೋಪ ಮಾಡಿದ್ದಾರೆ


“2016 ರಲ್ಲಿ ಹೋಲಿ ಆರ್ಟಿಸನ್ ಕೆಫೆಯ ಮೇಲಿನ ದಾಳಿಯಂತಹ ಭೀಕರ ಮತ್ತು ಮಾರಕ ದಾಳಿಗಳಿಗೆ ಕಾರಣರಾದ ಅದೇ ಉಗ್ರಗಾಮಿ ಶಕ್ತಿಗಳು ಇಂದು ಬಾಂಗ್ಲಾದೇಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಅದಕ್ಕೆ ಪೂರಕವಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.


ಬಾಂಗ್ಲಾದೇಶದಲ್ಲಿ ಕೊಲೆ, ಅತ್ಯಾಚಾರ, ದರೋಡೆ, ಬೆಂಕಿ ಹಚ್ಚುವಿಕೆ ಮತ್ತು ಕಳ್ಳತನದಂತಹ ಅಪರಾಧಗಳು ಸಾಮಾನ್ಯವಾಗಿದ್ದು, ಅಪರಾಧಿಗಳನ್ನು ಯಾವುದೇ ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡುತ್ತಿಲ್ಲ. ಮಹಮ್ಮದ್ “ಯೂನಸ್ ಆಡಳಿತದ ಮೊದಲ ವಾರಗಳಲ್ಲಿ, ಹಿಂದೂಗಳು, ಬೌದ್ಧರು, ಕ್ರಿಶ್ಚಿಯನ್ನರು ಮತ್ತು ಸ್ಥಳೀಯ ಜನರನ್ನು ಗುರಿಯಾಗಿಸಿಕೊಂಡು ಸಾವಿರಾರು ದಾಳಿಗಳು ವರದಿಯಾಗಿವೆ. ಇಂದಿಗೂ ದೇವಾಲಯಗಳು, ಮನೆಗಳು ಮತ್ತು ಪೂಜಾ ಸ್ಥಳಗಳನ್ನು ಅನಗತ್ಯವಾಗಿ ನಾಶಪಡಿಸಿದ ವಾರಕ್ಕೊಮ್ಮೆ ವರದಿ ಕೇಳಲಾಗುತ್ತಿತ್ತು ಎಂದಿದ್ದಾರೆ.