ಇಸ್ರೇಲ್ ದಾಳಿ:20 ಪ್ಯಾಲೆಸ್ತೇನಿಯರ ಸಾವು

ಗಾಜಾ, ಜು.1- ಗಾಜಾದ ಕಡಲತೀರದ ಕೆಫೆಯ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 20 ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದು ಡಜನ್‍ಗಟ್ಟಲೆ ನಾಗರಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಪಶ್ಚಿಮ ಗಾಜಾದಲ್ಲಿ ಕಾರ್ಯಕರ್ತರು, ಪತ್ರಕರ್ತರು ಮತ್ತು ಸ್ಥಳೀಯ ನಿವಾಸಿಗಳು ಹೆಚ್ಚಾಗಿ ಬಳಸುತ್ತಿದ್ದ ಜನಪ್ರಿಯ ಕಡಲತೀರದ ಕೆಫೆ ಇದಾಗಿದ್ದು ಈ ಕೆಫೆಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ, ಇದರ ಪರಿಣಾಮ ಅದರಲ್ಲಿದ್ದರ ಪೈಕಿ ಕನಿಷ್ಠ 20 ಪ್ಯಾಲೆಸ್ತೇನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಡಲತೀರದ ಉದ್ದಕ್ಕೂ ಡೇರೆಗಳನ್ನು ಒಳಗೊಂಡಿದ್ದ ಹೊರಾಂಗಣ ಸ್ಥಳವಾದ ಅಲ್-ಬಕಾ ಕೆಫೆಟೇರಿಯಾದಿಂದ ರಕ್ಷಣಾ ತಂಡಗಳು 20 ಶವಗಳನ್ನು ಮತ್ತು ಡಜನ್ಗಟ್ಟಲೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಗಾಜಾದ ಹಮಾಸ್ ನಡೆಸುವ ನಾಗರಿಕ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ದಾಳಯಿಂದ ಆಗಿರುವ ಹಾನಿಯ ತೀವ್ರತೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. “ಭಾರೀ ಸ್ಫೋಟ ಸಂಭವಿಸಿದಾಗ ಕೆಲವೇ ಮೀಟರ್ ದೂರದಲ್ಲಿ ಇಂಟರ್ನೆಟ್ ಬಳಸಲು ಕೆಫೆಗೆ ಹೋಗುತ್ತಿದ್ದೆ” ಎಂದು ಸ್ಥಳೀಯ ನಿರ್ಮಾಣ ಕಂಪನಿಯ ಕ್ಯಾಮೆರಾಮನ್ ಅಜೀಜ್ ಅಲ್-ಅಫಿಫಿ ಮಾಹಿತಿ ಹಂಚಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಹೋದ ಸಮಯದಲ್ಲಿ ಅಲ್ಲಿನ ದೃಶ್ಯ ಭಯಾನಕವಾಗಿತ್ತು, ದೇಹಗಳು, ರಕ್ತ ಸಿಕ್ತವಾಗಿತ್ತು ಎಲ್ಲೆಡೆ ಕಿರುಚುವುದು ಅರಚುವುದು ಕೇಳುತ್ತಿತ್ತು ಎಂದು ಘಟನೆಯ ಕುರಿತು ಪ್ರತ್ಯಕ್ಷದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ

ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯಕರ್ತರು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಇಸ್ರೇಲ್ ಯುದ್ಧ ವಿಮಾನದಿಂದ ಹಾರಿಸಲ್ಪಟ್ಟ ಕ್ಷಿಪಣಿಯಂದ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ

ಅಲ್-ಬಕಾ ಕೆಫೆಟೇರಿಯಾ ಪತ್ರಕರ್ತರು, ಕಾರ್ಯಕರ್ತರು ಮತ್ತು ದೂರದ ಕೆಲಸಗಾರರಿಗೆ ಪ್ರಸಿದ್ಧ ಸ್ಥಳವಾಗಿ ಮಾರ್ಪಟ್ಟಿದ್ದು, ಗಾಜಾದ ಮೆಡಿಟರೇನಿಯನ್ ಕರಾವಳಿಯಲ್ಲಿ ಇಂಟರ್ನೆಟ್ ಪ್ರವೇಶ, ಆಸನ ಮತ್ತು ಕೆಲಸದಲ್ಲಿ ನಿರತರಾದ ಮಂದಿಗೆ ಆಶ್ರಯ ತಾಣವಾಗಿತ್ತು ಎಂದು ಹೇಳಲಾಗಿದೆ

ಈ ದಾಳಿಯ ಬಗ್ಗೆ ಇಸ್ರೇಲ್‍ನಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇಸ್ರೇಲ್ ರಾತ್ರೋರಾತ್ರಿ ಗಾಜಾ ಪಟ್ಟಿಯಾದ್ಯಂತ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಈ ಅವಘಢ ಸಂಭವಿಸಿದೆ