ಇಸ್ರೇಲ್‍ನಿಂದ 160 ಭಾರತೀಯರು ಸ್ವದೇಶಕ್ಕೆ

ನವದೆಹಲಿ,ಜೂ.24- ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಆಪರೇಷನ್ ಸಿಂಧು ಅಡಿಯಲ್ಲಿ 604 ಭಾರತೀಯ ನಾಗರಿಕರನ್ನು ಇಸ್ರೇಲ್‍ನಿಂದ ಜೋರ್ಡಾನ್ ಮತ್ತು ಈಜಿಪ್ಟ್ ಮೂಲಕ ಸ್ಥಳಾಂತರಿಸಲಾಗಿದೆ. 160 ಭಾರತೀಯ ನಾಗರಿಕರ ಮೊದಲ ಬ್ಯಾಚ್ ಜೂನ್ 24 ರಂದು ನವದೆಹಲಿ ತಲುಪಿದೆ. ಅದರಲ್ಲಿ 61 ಕನ್ನಡಿಗರು ಸೇರಿದ್ದಾರೆ . ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಮಾಹಿತಿಯನ್ನು ನೀಡಿದೆ.

ಸೋಮವಾರ ರಾತ್ರಿ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ ಅದರ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಇಸ್ರೇಲ್‍ನಿಂದ ಜೋರ್ಡಾನ್ ಮತ್ತು ನಂತರ ಅಮ್ಮನ್ ಮೂಲಕ ಹೊರಟ ವಿಮಾನವನ್ನು ಕುವೈತ್‍ಗೆ ತಿರುಗಿಸಲಾಗಿದೆ.

ಇದಕ್ಕೂ ಮೊದಲು, ಆಪರೇಷನ್ ಸಿಂಧು ಅಡಿಯಲ್ಲಿ, ಭಾರತ ಸರ್ಕಾರ ಸೋಮವಾರ ಇರಾನ್‍ನ ಮಶಾದ್‍ನಿಂದ 290 ಭಾರತೀಯರು ಮತ್ತು ಒಬ್ಬ ಶ್ರೀಲಂಕಾದ ನಾಗರಿಕನನ್ನು ದೆಹಲಿಗೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಹೀಗಾಗಿ, ಇಲ್ಲಿಯವರೆಗೆ ರಕ್ಷಿಸಲಾದ ಒಟ್ಟು ಭಾರತೀಯರ ಸಂಖ್ಯೆ 2003 ಕ್ಕೆ ತಲುಪಿದೆ.
ಆಪರೇಷನ್ ಸಿಂಧು ಭಾಗವಾಗಿ ಮುಂದಿನ ಎರಡು ಮೂರು ದಿನಗಳಲ್ಲಿ ಭಾರತ ಸರ್ಕಾರ ಇರಾನ್‍ನಿಂದ ಮೂರು ಹೆಚ್ಚುವರಿ ಸ್ಥಳಾಂತರಿಸುವ ವಿಮಾನಗಳನ್ನು ನಿಗದಿಪಡಿಸಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ ಹೇಳಿದ್ದಾರೆ.

6 ಗಲ್ಫ್ ದೇಶಗಳಲ್ಲಿ 90 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ. ಗರಿಷ್ಠ ಸಂಖ್ಯೆಯ ಭಾರತೀಯರು ಯುಎಇ (35.5 ಲಕ್ಷ), ಸೌದಿ ಅರೇಬಿಯಾ (26 ಲಕ್ಷ), ಕುವೈತ್ (11 ಲಕ್ಷ), ಕತಾರ್ (7.45 ಲಕ್ಷ), ಒಮಾನ್ (7.79 ಲಕ್ಷ) ಮತ್ತು ಬಹ್ರೇನ್ (3.23 ಲಕ್ಷ) ನಲ್ಲಿದ್ದಾರೆ