
ನವದೆಹಲಿ, ಜೂ.21:- ಇರಾನ್‍ನಿಂದ 290 ಭಾರತೀಯರನ್ನು ಹೊತ್ತ ವಿಮಾನ ಶುಕ್ರವಾರ ತಡರಾತ್ರಿ ದೆಹಲಿ ತಲುಪಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಆಪರೇಷನ್ ಸಿಂಧು ಅಡಿಯಲ್ಲಿ ನೂರಾರು ಭಾರತೀಯ ನಾಗರಿಕರನ್ನು ಹೊತ್ತ ವಿಶೇಷ ವಿಮಾನವು ಇರಾನ್‍ನಿಂದ ಸುರಕ್ಷಿತವಾಗಿ ಭಾರತಕ್ಕೆ ತಲುಪಿದಾಗ ಭಾವನಾತ್ಮಕ ದೃಶ್ಯ ಕಂಡುಬಂದಿದೆ.
ಆಗಮಿಸಿದ ಎಲ್ಲ ನಾಗರಿಕರು ಕೈಯಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ಆಗಮಿಸಿದ್ದು ವಿಶೇಷವಾಗಿತ್ತು.ಅವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಾಗಿರುವ ವಿದ್ಯಾರ್ಥಿಗಳು. ಇರಾನ್ ವಿಶೇಷ ಕ್ರಮವನ್ನು ಕೈಗೊಂಡು 1,000 ಭಾರತೀಯರನ್ನು ಸ್ಥಳಾಂತರಿಸಲು ತನ್ನ ವಾಯುಪ್ರದೇಶವನ್ನು ತೆರೆದಿದೆ. ಈ ಭಾರತೀಯರನ್ನು ಮೂರು ಚಾರ್ಟರ್ಡ್ ವಿಮಾನಗಳ ಮೂಲಕ ಕರೆತರಲಾಗುತ್ತಿದೆ.
ಇರಾನ್ ಮೇಲೆ ಇಸ್ರೇಲಿ ದಾಳಿಯ ನಂತರ, ಭಾರತೀಯರನ್ನು ಟೆಹ್ರಾನ್‍ನಿಂದ ಮಶಾದ್ ನಗರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಂದ ಸ್ಥಳಾಂತರಿಸುವ ವಿಮಾನಗಳನ್ನು ಭಾರತ ವ್ಯವಸ್ಥೆ ಮಾಡಿರುವ ಇರಾನ್ ಏರ್‍ಲೈನ್ಸ್ ಮಹಾನ್ ನಿರ್ವಹಿಸುತ್ತಿದೆ. ಮಶಾದ್‍ನಿಂದ ಎರಡು ವಿಮಾನಗಳು ಇಂದು ಶನಿವಾರ ನವದೆಹಲಿ ತಲುಪುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ತುರ್ಕಮೆನಿಸ್ತಾನದ ರಾಜಧಾನಿ ಅಶ್ಗಾಬತ್‍ನಿಂದ ಭಾರತೀಯರನ್ನು ಹೊತ್ತ ಮತ್ತೊಂದು ವಿಮಾನವೂ ಆಗಮಿಸಲಿದೆ. ಈ ವಿಮಾನದಲ್ಲಿ ಬರುವ ಭಾರತೀಯರನ್ನು ರಸ್ತೆ ಮೂಲಕ ಟೆಹ್ರಾನ್‍ನಿಂದ ಅಶ್ಗಾಬತ್‍ಗೆ ಸ್ಥಳಾಂತರಿಸಲಾಗಿದೆ.
ಇಸ್ರೇಲಿ ದಾಳಿಯ ನಂತರ, ಭಾರತೀಯರನ್ನು ಮೊದಲು ಟೆಹ್ರಾನ್‍ನಿಂದ ಮಶಾದ್‍ಗೆ ಕರೆತರಲಾಗಿದೆ. ಇದರ ನಂತರ, ಅವರನ್ನು ಇರಾನಿನ ವಿಮಾನಯಾನ ಸಂಸ್ಥೆ ಮಹಾನ್ ಸಹಾಯದಿಂದ ಭಾರತಕ್ಕೆ ಕರೆತರಲಾಗುತ್ತಿದೆ. ಈ ಕಾರ್ಯಾಚರಣೆಯ ಸಂಪೂರ್ಣ ವ್ಯವಸ್ಥೆಯನ್ನು ಭಾರತ ಸರ್ಕಾರ ಮಾಡಿದೆ.
ವಿಮಾನದಿಂದ ಇಳಿದ ತಕ್ಷಣ ಜನರು ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದ್ದಾರೆ. ಅನೇಕ ಜನರ ಕಣ್ಣುಗು , ತೇವಗೊಂಡವು, ಮತ್ತೆ ಕೆಲವರು ಭಾರತದ ನೆಲವನ್ನು ಸ್ಪರ್ಶಿಸುವ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಯುದ್ಧದ ರೂಪವನ್ನು ಪಡೆದುಕೊಂಡಿದೆ.