ಇನ್ಶೂರೆನ್ಸ್ ಹೆಸರಲ್ಲಿ ಪುತ್ತೂರಿನ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ: ಮಂಡ್ಯದಲ್ಲಿ ಆರೋಪಿಯ ಬಂಧನ

ಮಂಗಳೂರು: ವಿಮಾ ಪಾಲಿಸಿ ನವೀಕರಣ ಹಾಗೂ ರದ್ದತಿಯ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ, ಪ್ರಸ್ತುತ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆಯಲ್ಲಿ ವಾಸವಿರುವ ಅವಿನಾಶ್ ರಮೇಶ್ ಗೌಡ (೨೪) ಬಂಧಿತ ಆರೋಪಿ.
ಪುತ್ತೂರು ನಿವಾಸಿ ಯಶೋಧರ ಎಂಬವರಿಗೆ ವಿವಿಧ ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿದ್ದ ಆರೋಪಿಯು, ತಾನು ವಿಮಾ ಕಂಪನಿಯೊಂದರ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ. ಇನ್ಶೂರೆನ್ಸ್ ಮಾಡಿಸುವಂತೆ ಆತ ಒತ್ತಾಯಿಸಿದ್ದರೂ ದೂರುದಾರ ನಿರಾಕರಿಸಿದ್ದರು. ಆ ಬಳಿಕ ನಿಮ್ಮ ಹಳೆಯ ಇನ್ಶೂರೆನ್ಸ್ ಕ್ಯಾನ್ಸಲ್ ಮಾಡಿಕೊಡುತ್ತೇನೆ ಎಂದು ನಂಬಿಸಿದ ಆರೋಪಿ, ಅವರಿಂದ ಕ್ರೆಡಿಟ್ ಕಾರ್ಡ್ ವಿವರ ಹಾಗೂ ಓಟಿಪಿ (ಔಖಿP) ಪಡೆದುಕೊಂಡಿದ್ದ. ಕ್ಷಣಾರ್ಧದಲ್ಲಿ ಯಶೋಧರ ಅವರ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು ೨,೩೭,೦೩೬/- ರೂ. ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿ ವಂಚಿಸಿದ್ದ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್ ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ತನಿಖೆ ನಡೆಸಿದ ಪೊಲೀಸರು, ಫೆಬ್ರವರಿ ೧೧ರಂದು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.