ಇಂದು ಮತ್ತು ನಾಳೆ ನಗರದಲ್ಲಿ ಗ್ರಾಮಾಂತರ ಬಸವ ಜಯಂತೋತ್ಸವ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.21-
ಚಾಮರಾಜನಗರ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದಿಂದ ಮೇ 21, 22 ರಂದು ನಗರದಲ್ಲಿ ಗ್ರಾಮಾಂತರ ಬಸವ ಜಯಂತೋತ್ಸವ, ಪೂಜ್ಯದ್ವಯರ ಸಂಸ್ಕರಣೋತ್ಸವ ಕಾರ್ಯಕ್ರಮ ಆಯೋಜಿಸÀಲಾಗಿದೆ ಎಂದು ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು.


ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದಲ್ಲಿ ನಾಡಿನ ಪರಮ ಪೂಜ್ಯರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮೇ 22 ರಂದು ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ 50 ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೇ 21 ರಂದು ರಾತ್ರಿ 8 ಗಂಟೆಯಿಂದ ವಚನಗಾಯನ, ಭಕ್ತಿಗೀತೆಗಳು, ಗ್ರಾಮಾಂತರ ಭಜನೆ ಕಾರ್ಯಕ್ರಮವಿರುತ್ತದೆ. ಮೇ 22 ರಂದು ಬೆಳಗ್ಗೆ 5 ಗಂಟೆಗೆ ಪೂಜ್ವರ ಗದ್ದುಗೆಗೆ ಜಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ, 6 ಗಂಟೆಗೆ ಷಟ್ಟಲ ಧ್ವಜಾರೋಹಣ, 7 ಗಂಟೆ ಇಷ್ಟಲಿಂಗ ಪೂಜೆ, 10 ಗಂಟೆಗೆ ಪ್ರವಚನ ಕಾರ್ಯಕ್ರಮವಿರುತ್ತದೆ ಎಂದು ತಿಳಿಸಿದರು.


ಮೇ 22 ರಂದು ರಾತ್ರಿ 8 ಗಂಟೆಗೆ ಬದನಗುಪ್ಪೆ ಶ್ರೀ ಗುರುಮಲ್ಲೇಶ್ವರ ನಾಟಕ ಮಂಡಳಿ ವತಿಯಿಂದ ಪ್ರಭುಲಿಂಗಲೀಲೆ ನಾಟಕ ಏರ್ಪಡಿಸಲಾಗಿದೆ. ಎರಡು ದಿನವೂ ಶ್ರೀಮಠದಲ್ಲಿ ಭಕ್ತರಿಗೆ ನಿರಂತರ ಪ್ರಸಾದ ನಡೆಯುತ್ತದೆ. ಈ ಬಾರಿ ಮೆರವಣಿಗೆ ಇರುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಜಯಂತೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.