
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.26: ಇಂದು ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ. ಹಿಂದೆಲ್ಲಾ ಕ್ಷೇತ್ರದ ಜನರೇ ನಮಗೆ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೇ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದ ಕಾಲ ಮುಗಿದಿದೆ. ಈಗ ಜನರಿಗೆ ನಾವೇ ದುಡ್ಡುಕೊಡಬೇಕಾದ ಕಾಲ ಬಂದಿದೆ. ಆದಕಾರಣ 2028 ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿದ್ದು ಜನರ ಕಷ್ಠ ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆಂದು ರಾಜ್ಯದ ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಪಟ್ಟಣದ ಹೊರವಲಯದ ಜಯಮ್ಮ ರಾಮಸ್ವಾಮಿ ಸಮುದಾಯ ಭವನದಲ್ಲಿ ಮಾಜಿ ಸ್ಪೀಕರ್ ದಿವಂಗತ ಕೃಷ್ಣ್ಣ ಅವರ 86ನೇ ಜನ್ಮದಿನದ ಅಂಗವಾಗಿ ಕೃಷ್ಣ ಪ್ರತಿಷ್ಟಾನದ ವತಿಯಿಂದ ಆಯೋಜಿಸಿದ್ದ ಕೃಷ್ಣ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷ್ಣ ವರ ಜೊತೆಗಿನ ತಮ್ಮ ರಾಜಕೀಯ ಜೀವನದ ಒಡನಾಟವನ್ನು ಸ್ಮರಿಸಿದ ಸಿದ್ದರಾಮಯ್ಯ ನಾವಿಬ್ಬರೂ ಏಕಕಾಲಕ್ಕೆ ರಾಜಕೀಯ ಕ್ಷೇತ್ರ ಪ್ರವೇಶಿಸಿದವರು. ಆದರೆ ಅವರಿಗಿಂತ ಮೊದಲು ನಾನು ಶಾಸಕನಾದೆ. ಕೆ.ಆರ್.ಪೇಟೆಯ ಮಾಜಿ ಶಾಸಕ ಎಸ್.ಎಂ.ಲಿಂಗಪ್ಪ ಅವರ ಅನುಯಾಯಿಯಾಗಿದ್ದ ಕೃಷ್ಣ ಎಸ್.ಎಂ.ಲಿಂಗಪ್ಪ ಅವರ ರಾಜಕೀಯ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು. ತಮ್ಮ ಸರಳ ಮತ್ತು ಸಜ್ಜನ ನಡವಳಿಕೆಯಿಂದ ಮಂಡ್ಯದ ಗಾಂಧಿ ಎಂದು ಹೆಸರಾದ ಕೃಷ್ಣ ಗಾಂಧಿ ವಿಚಾರ ಧಾರೆಗಳನ್ನು ಮೈಗೂಡಿಸಿಕೊಂಡಿದ್ದರೆಂದರು. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ, ರಾಜ್ಯ ವಿಧಾನ ಸಭೆಯ ಸ್ಪೀಕರ್ ಆಗಿ ರಾಜಕೀಯ ಉತ್ತಂಗದಲ್ಲಿದ್ದರೂ ಕೃಷ್ಣ ತಮ್ಮ ಸರಳತೆ ಮತ್ತು ಸಜ್ಜನಿಕೆಯನ್ನು ಬಿಟ್ಟುಕೊಟ್ಟವರಲ್ಲ. ಕೃಷ್ಣ ಅವರು ಬದುಕಿರುವವರೆಗೂ ನಾನು ಕೃಷ್ಣ ಅವರೊಂದಿಗೆ ರಾಜಕೀಯ ವಿಚಾರಗಳ ಚರ್ಚೆ ಮಾಡುತ್ತಿದ್ದೆ ಬೆಂಗಳೂರಿನಲ್ಲಿದ್ದಾಗಲೆಲ್ಲಾ ಕೃಷ್ಣ ನನ್ನನ್ನು ನೋಡದೆ ಎಂದಿಗೂ ಹೋಗುತ್ತಿರಲಿಲ್ಲ. ಅಷ್ಟೋಂದು ಆತ್ಮೀಯತೆ ಕೃಷ್ಣ ಮತ್ತು ನನ್ನ ನಡುವೆಯಿತ್ತು ಎಂದು ಸಿದ್ದರಾಮಯ್ಯ ತಿಳಿಸಿದರು. ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಜಿ.ಮಾದೇಗೌಡ ಬಹುದೊಡ್ಡ ಶಕ್ತಿ. ಈ.ಮಾದೇಗೌಡರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ಕೆ.ಆರ್.ಪೇಟೆ ಕೃಷ್ಣ ಅವರದ್ದೆಂದರು. ಅವರ ವಿರುದ್ದ ಸ್ಪರ್ಧಿಸಲು ಜಿಲ್ಲೆಯಲ್ಲಿ ಯಾರೂ ತಯಾರಿರಲ್ಲಿಲ್ಲ. ಅಂತ ಪರಿಸ್ಥಿತಿಯಲ್ಲಿ ನಾನು ಮತ್ತು ಹೆಚ್.ಡಿ.ದೇವೇಗೌಡರು ಚರ್ಚಿಸಿ ಅಂದು ಶಾಸಕರಾಗಿದ್ದ ಕೃಷ್ಣ ಅವರ ರಾಜೀನಾಮೆ ಕೊಡಿಸಿ ಮಂಡ್ಯ ಸಂಸತ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಿ ಜಿ.ಮಾದೇಗೌಡರ ವಿರುದ್ದ ಗೆಲ್ಲಿಸಕೊಂಡು ಬರಲಾಗಿತ್ತು. ಕೃಷ್ಣ ಅವರ ಗೆಲುವಿಗೆ ಅವರ ಸರಳತೆಯೇ ಕಾರಣವಾಗಿತ್ತು ಎಂದ ಸಿದ್ದರಾಮಯ್ಯ ಕಲುಷಿತ ರಾಜಕಾರಣದ ಬಗ್ಗೆ ತಮ್ಮ ರಾಜಕೀಯದ ಕೊನೆಯ ದಿನಗಳಲ್ಲಿ ಕೃಷ್ಣ ತೀವ್ರ ಬೇಸರಕ್ಕೆ ಒಳಗಾಗಿದ್ದರು. ಪ್ರಾಮಣಿಕ ರಾಜಕಾರಣಕ್ಕೆ ಉಳಿವಿಲ್ಲ ಎನ್ನುವ ನಿಲುವಿಗೆ ಬಂದ ಕೃಷ್ಣ ಕ್ಷೇತ್ರದ ಜನ ಬಯಸುತ್ತಿದ್ದರೂ ರಾಜಕೀಯ ನಿವೃತ್ತಿ ಘೋಷಿಸಿ ಸಕ್ರಿಯ ರಾಜಕಾರಣದಿಂದ ದೂರ ಉಳಿದರು ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ ಮಾಡಿ ಮಾತನಾಡಿದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ರಾಜಕೀಯದಲ್ಲಿ ಹೊಂದಾಣಿಕೆ ಸಹಜ. ರಾಜಕೀಯವಾಗಿ ಮೌಲ್ಯ ಉಳಿಸಿಕೊಂಡು ರಾಜಕೀಯ ಮಡುವುದು ಕಷ್ಠಕರ. ರಾಜಕಾರಣಿಯಾಗಿ ಕೃಷ್ಣ ಶೇ.20 ರಷ್ಟು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಶೆ.80 ರಷ್ಟು ಮೌಲ್ಯಧಾರಿತ ರಾಜಕಾರಣ ಮಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕ ಮನೆ ಅಂಕೇಗೌಡ, ಶೂದ್ರಶಕ್ತಿ ಪತ್ರಿಕೆಯ ಸಂಪಾದಕ ಬಿ.ಆರ್.ರಾಮೇಗೌಡ, ಹೈನುಗಾರಿಕೆಯ ಮೂಲಕ ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ರೈತ ಮಹಿಳೆ ಹೆಮ್ಮನಹಳ್ಳಿ ಪವಿತ್ರ ಹಾಗೂ ಕಳೆದ ಸಾಲಿನ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಾಲೂಕಿಗೆ ಕೀರ್ತಿತಂದ ಡಾ.ಮುತ್ತೇಶ್ ಗೌಡ ಅವರ ತಂದೆ ತಾಯಿಯನ್ನು ಇದೇ ಸಂದರ್ಭದಲ್ಲಿ ಶಾಸಕ ಹೆಚ್.ಟಿ.ಮಂಜು ಕೃಷ್ಣ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು.
ಉಳಿದಂತೆ ವಿವಿಧ ಕ್ಷೇತ್ರಗಳ ಸಾಧಕರಾದ ತಾಲೂಕಿನ ಮನ್ ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಲಿಯ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್, ಕೈಗಾರಿಕಾ ಮಾರಾಟ ಮಹಾಮಂಡಲಿಯ ಅಧ್ಯಕ್ಷ ಬಸ್ ಸಂತೋಷ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಐಚನಹಳ್ಳಿ ಶಿವಣ್ಣ, ಕೋಟೆ ಭೈರವೇಶ್ವರ ಸಹಕಾರ ಸಂಘದ ಅಧ್ಯಕ್ಷೆ ಮಂಜುಳ ಚೆನ್ನಕೇಶವ ಮತ್ತು ತಾಲೂಕಿನ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಕೃಷ್ಣ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷ್ಣ ಅವರ ಧರ್ಮಪತ್ನಿ ಪೆÇ್ರೀ.ಇಂದಿರಮ್ಮ, ಮಾಜಿ ಶಾಸಕ ಬಿ.ಪ್ರಕಾಶ್, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು, ಎಂ.ಡಿ.ಕೃಷ್ಣಮೂರ್ತಿ, ಡಾಲು ರವಿ, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಸೇರಿದಂತೆ ಹಲವಾರು ಮುಖಂಡರು ಕೃಷ್ಣ ಪ್ರತಿಷ್ಟಾನದ ಆಡಳಿತ ಮಂಡಲಿ ಸದಸ್ಯರುಗಳು ಉಪಸ್ಥಿತರಿದ್ದರು.


































