
ಬೆಂಗಳೂರು, ಜೂ.1- ಸನ್ ಉದಯ ವಾಹಿನಿಯ ಹೊಸ ಧಾರಾವಾಹಿಮಹಾಲಕ್ಷ್ಮೀ ಮದುವೆ’ ಜೂನ್ 1ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗಲಿದ್ದು, ಅದರ ಪ್ರಯುಕ್ತ ಆಯೋಜಿಸಿದ್ದ ಪ್ರೀಮಿಯರ್ ಶೋಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಧಾರಾವಾಹಿಯ ಮೊದಲ ಎರಡು ಕಂತುಗಳ ವಿಶೇಷ ಪ್ರದರ್ಶನವನ್ನು ಭಾನುವಾರ ನಗರದ ಡಾ. ರಾಜ್‍ಕುಮಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭಿಮಾನಿಗಳು ಧಾರಾವಾಹಿಯನ್ನು ವೀಕ್ಷಿಸಿ ಕಲಾವಿದರು ಹಾಗೂ ತಾಂತ್ರಿಕ ತಂಡದೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕಿ ಅಮೂಲ್ಯ ಗೌಡ, ಧಾರಾವಾಹಿಯ ಕಥೆ ಮತ್ತು ಪಾತ್ರಗಳು ಪ್ರತಿಯೊಬ್ಬರ ಮನೆಯಲ್ಲೇ ನಡೆಯುವ ಘಟನೆಗಳಂತೆ ಭಾಸವಾಗುತ್ತವೆ. ಪ್ರತಿಯೊಂದು ಸನ್ನಿವೇಶವೂ ಕುತೂಹಲ ಮೂಡಿಸುವಂತಿದ್ದು, ನಿರ್ದೇಶಕರು ಕಲಾವಿದರಿಂದ ಉತ್ತಮ ಅಭಿನಯ ಹೊರತಂದಿದ್ದಾರೆ ಎಂದು ಹೇಳಿದರು.
ನಾಯಕ ಭರತ್ ಶಿವಣ್ಣ ಮಾತನಾಡಿ, ಕಿರುಚಿತ್ರಗಳ ಬಳಿಕ ಮೊದಲ ಬಾರಿಗೆ ಸನ್ ಉದಯ ವಾಹಿನಿಯ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ತಮ್ಮ ಪಾತ್ರ ಸವಾಲಿನದ್ದಾಗಿದ್ದು, ಅದಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮೃತ ರಾಮಮೂರ್ತಿ ಹಾಗೂ ಸೀತಾ ಕೋಟೆ ಸೇರಿದಂತೆ ಇತರ ಕಲಾವಿದರು ತಮ್ಮ ಪಾತ್ರಗಳ ಕುರಿತು ಅಭಿಪ್ರಾಯ ಹಂಚಿಕೊಂಡರು. ಧಾರಾವಾಹಿಯಲ್ಲಿ ಶಿವಾಜಿ ರಾವ್ ಜಾಧವ್, ಮೂಗು ಸುರೇಶ್, ಪದ್ಮಿನಿ, ಮಂಜು ಪಾವಗಡ, ಮಾನಸ, ಮೇಘಶ್ರೀ, ಸ್ನೇಹಾ ಭಟ್, ಪ್ರತೀಕ್ಷಾ, ಧನುಷ್ ಗೌಡ, ಹರಿಪ್ರಿಯಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಲೈಮ್‍ಲೈಟ್ ಪೆÇ್ರಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಧ್ವಜ್ ಶೆಟ್ಟಿ ಹಾಗೂ ಪ್ರಶಾಂತ್ ರೈ ನಿರ್ಮಿಸಿರುವ ಈ ಧಾರಾವಾಹಿಗೆ ಶಿವ ಪೂಜೇನ ಅಗ್ರಹಾರ ನಿರ್ದೇಶನವಿದೆ.
ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಲ್ಲಿರುವ ಶ್ರೀಹರಿ ಮತ್ತು ಮಹಾಲಕ್ಷ್ಮಿಯ ಮದುವೆಯನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಸಾಗುತ್ತದೆ. ಒಂದೇ ಒಂದು ಸುಳ್ಳಿನ ಆಧಾರದ ಮೇಲೆ ನಡೆದ ಮದುವೆ ಬಳಿಕ ಅವರ ಬದುಕಿನಲ್ಲಿ ಎದುರಾಗುವ ಸವಾಲುಗಳು ಮತ್ತು ಮಹಾಲಕ್ಷ್ಮಿ ಅವುಗಳನ್ನು ಹೇಗೆ ಎದುರಿಸುತ್ತಾಳೆ ಎಂಬುದು ಧಾರಾವಾಹಿಯ ಪ್ರಮುಖ ಕಥಾಹಂದರವಾಗಿದೆ.
`ಮಹಾಲಕ್ಷ್ಮೀ ಮದುವೆ’ ಧಾರಾವಾಹಿ ಜೂನ್ 1ರಿಂದ ಸನ್ ಉದಯ ವಾಹಿನಿಯಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.





























