
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಮಾ.18: ಇಂದಿನಿಂದ ಪ್ರಾರಂಭವಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಯಲ್ಲಿ ಪರೀಕ್ಷಾಪೂರ್ವ ಸಿದ್ಧತೆ ಸಂಬಂಧ ಪರೀಕ್ಷಾ ಕೇಂದ್ರಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂದಿಸಿದ ಶಿಕ್ಷಕರಿಗೆ ಸಲಹೆ ಸೂಚನೆ ನೀಡಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ನಿಯಮಾನುಸಾರವಾಗಿ ನಡೆಸಲು ಅಗತ್ಯವಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಬಿಇಓ ಆರ್.ಕೃಷ್ಣಪ್ಪ ಪ್ರಸಕ್ತ ಸಾಲಿನಲ್ಲಿ ನಮ್ಮ ತಾಲ್ಲೂಕಿನಲ್ಲಿ 35 ಸರ್ಕಾರಿ , 6 ವಸತಿ ಶಾಲೆ, 13 ಅನುದಾನಿತ 18 ಅನುದಾನರಹಿತ ಒಟ್ಟು 72 ಪ್ರೌಢ ಶಾಲೆಗಳಿದ್ದು, 11 ಪರೀಕ್ಷಾ ಕೇಂದ್ರಗಳು, 130 ಕೊಠಡಿಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ನಡೆಯಲಿವೆ. ಒಟ್ಟು 2979 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಹೊಸದಾಗಿ ಪರೀಕ್ಷೆ ಬರೆಯುವರು ಬಾಲಕರು-1348, ಬಾಲಕಿಯರು 1340, ಇನ್ನೂ ಪುನರಾವರ್ತಿತ ಬಾಲಕರು – 161, ಬಾಲಕಿಯರು – 130 ಇದ್ದಾರೆ. 220 ಕೊಠಡಿ ಮೇಲ್ವಿಚಾರಕರು 75 ಸಿಬ್ಬಂದಿ ವರ್ಗದವರು ಪರೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದರು.
ತಾಲ್ಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿ ಪರೀಕೆಗೆ ಅಗತ್ಯವಾದ ಮೇಜು-ಕುರ್ಚಿ ಕುಡಿಯುವ ನೀರು, ಗಾಳಿ-ಬೆಳಕು, ಹಾಗೂ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿರುವುದನ್ನು ಖಚಿತಪಡಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ಭದ್ರತಾ ವ್ಯವಸ್ಥೆ ಮತ್ತು ಶಿಸ್ತು ಕಾಪಾಡುವ ಕ್ರಮಗಳನ್ನು ಕೈಗಳ್ಳಲಾಗಿದೆ. ಪರೀಕ್ಷೆ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ಮಾರ್ಗದರ್ಶನ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ಪೆÇೀಲೀಸ್ ಇಲಾಖೆ, ಆರೋಗ್ಯ ಇಲಾಖೆ, ಚೆಸ್ಕಾಂ, ಕೆ.ಎ.ಆರ್.ಟಿ.ಸಿ ಇಲಾಖೆಗಳ ಸಮನ್ವಯ ಮಾಡಲಾಗಿದೆ ಎಂದು ತಿಳಿಸಿದರು.
ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ವರ್ಷದ ಆರಂಭದಿಂದಲೂ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ವಿಷಯ ಶಿಕ್ಷಕರೊಂದಿಗೆ ಸಭೆ ಕಾರ್ಯಾಗಾರಗಳನ್ನು ನಡೆಸಿ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಗಮನದಲ್ಲಿಟ್ಟು ಪುನರಾರ್ವತನ ತರಗತಿಗಳು, ವಿಶೇಷ ತರಗತಿಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪ್ರೇರಣಾ ಕಾರ್ಯಕ್ರಮಗಳು, ಸಲಹಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದಂತೆ ಹಾಗೂ ವಿಷಯವಾರು ಸಂದೇಹಗಳನ್ನು ನಿವಾರಿಸಲು ಮಾನ್ಯ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆ ಇವರಿಂದ ಮಕ್ಕಳ ಸಹಾಯವಾಣಿ ಆರಂಭಿಸಲಾಗಿದೆ. ಈ ಎಲ್ಲಾ ಕ್ರಮಗಳ ಮೂಲಕ ತಾಲ್ಲೂಕಿನ ಫಲಿತಾಂಶ ಜಿಲ್ಲೆಯಲ್ಲಿ ಮೊದಲ ಮೂರು ಸ್ಥಾನದೊಳಗೆ ಪಡೆಯುವ ನಿರೀಕ್ಷೆ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.























