ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ 2 ವರ್ಷದ ಪುಟಾಣಿ

ತುಮಕೂರು, ಮೇ 24:- ಸತತ ಪರಿಶ್ರಮದಿಂದ ಪ್ರತಿಭೆ ಗಳಿಸಿಕೊಳ್ಳುವುದು ಒಂದು ವಿಧಾನವಾದರೆ ಮತ್ತೆ ಕೆಲವರಿಗೆ ದೈವದತ್ತವಾಗಿ ಅಸಾಧಾರಣಾ ಪ್ರತಿಭೆ ಹುಟ್ಟಿನಿಂದಲೆ ಬಂದಿರುತ್ತದೆ. ಅದು ಮಕ್ಕಳೇ ಆಗಿರಬಹುದು, ದೊಡ್ಡವರೇ ಆಗಿರಬಹುದು. ಈ ಕಾರಣಕ್ಕಾಗಿಯೇ ಪ್ರತಿಭೆ ಯಾರ ಮನೆಯ ಖಾಸಗಿ ಸ್ವತ್ತಲ್ಲ ಮತ್ತು ಎಂದೂ ಕಳ್ಳಕದಿಯದ ಆಸ್ತಿಯಲ್ಲ ಎಂದು ಹೇಳುವುದು ಸಾಮಾನ್ಯವಾಗಿದೆ.

ಕಾಲದ ಮಹಿಮೆಗೆ ತಕ್ಕಂತೆ ನಿರೀಕ್ಷೆಗೂ ಮೀರಿದ ಅಸಾಧಾರಣ ಪ್ರತಿಭೆಯ ಪ್ರಚಂಡ ಪುಟಾಣಿಗಳು ಅಲ್ಲಲ್ಲಿ ಕಾಣುವುದುಂಟು. ಈಗ ನಾವು ಹೇಳುತ್ತಿರುವ ಇಂತಹ ಪ್ರಚಂಡ ಪುಟಾಣಿ ಹೆಸರು ಕಿಯಾನ್ಷ ಎಂ.ಜಿ. ಮೂಲತಃ ಆನವಟ್ಟಿ ಗ್ರಾಮದ ಸೊರಬ ತಾಲ್ಲೂಕಿನ ಶಿವಮೊಗ್ಗ ಜಿಲ್ಲೆಯವರು ವಯಸ್ಸಿನ್ನೂ ಎರಡು ವರ್ಷ, ಅಬ್ಬಬ್ಬಾ ಅದೇನು ಗ್ರಹಿಕೆ ಶಕ್ತಿ. ಮಗುವಿನ ಸಾಧನೆಯನ್ನು ಇತ್ತೀಚಿಗೆ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಪ್ರಮಾಣೀಕರಿಸಿ ಐ.ಬಿ.ಆರ್. ಸಾಧಕಿ ಎಂದು ಬಿರುದು ನೀಡಿದ್ದಾರೆ. ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಸೇರಿದ ನಂತರವೂ ಬಹಳ ಕಷ್ಟಪಟ್ಟು ನೆನಪಿಟ್ಟುಕೊಳ್ಳುವ ಮಗ್ಗಿ, ತಿಂಗಳುಗಳ ಹೆಸರುಗಳು, ವಿವಿಧ ರಾಜ್ಯಗಳ ರಾಜಧಾನಿಗಳ ಹೆಸರುಗಳೆಲ್ಲವೂ ಈ ಮಗುವಿನ ಮೆದುಳಿನಲ್ಲಿ ಸಂಗ್ರಹವಾಗಿರುವ ರೀತಿ ಎಂತಹವರಿಗೂ ಅಚ್ಚರಿ ಮೂಡಿಸಲಿದೆ. ಇದು ದೇವರು ಕೊಟ್ಟ ಅಗಾಧ ನೆನಪಿನ ಶಕ್ತಿ, ವರ ಎಂದರೂ ತಪ್ಪಾಗಲಾರದು.

7 ಆಕರಗಳು, 13 ವಾಹನಗಳು, 9 ಪ್ರಾಣಿಗಳ ಹೆಸರು, 9 ಬಣ್ಣಗಳ ಹೆಸರು, 22 ನಾನಾ ವಸ್ತುಗಳು, ಮಾನವ ಶರೀರದ ಭೂಪಟದಲ್ಲಿನ ದೇಹದ ನಾನಾ ಭಾಗಗಳನ್ನು ಗುರುತಿಸಿ ಕೇಳಿದ ತಕ್ಷಣ ಪಟಪಟನೆ ಹೇಳಿ ಬೆರಗು ಮೂಡಿಸುತ್ತಾಳೆ. ತಂದೆ- ತಾಯಿ ಇಬ್ಬರು ವೃತ್ತಿಯಲ್ಲಿ ಆರ್ಕಿಟಿಕ್ಟ್ ಸತ್ಯಶ್ರೀ ಕೆ.ಆರ್. ಹಾಗೂ ಇಂಜಿನಿಯರ್ ಗುರುರಾಜ್ ಎಂ.ವಿ. ಅವರ ಮುದ್ದಿನ ಮಗಳು ಕಿಯಾನ್ಷ ಎಂ.ಜಿ. ಕೇವಲ 22 ತಿಂಗಳಲ್ಲೆ ಪ್ರಾಸಗಳನ್ನು ಪಠಿಸಲು ಪ್ರಾರಂಭಿಸಿದಾಗ ಪೋಷಕರು ಆಕೆಯ ಅಸಾಧಾರಣಾ ಕೌಶಲ್ಯವನ್ನು ಗಮನಿಸಿ ಅದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಾ ಬಂದರು.

2 ವರ್ಷ 3 ತಿಂಗಳ ಕಿಯಾನ್ಷ 5 ರಾಷ್ಟ್ರೀಯ ಚಿಹ್ನೆಗಳನ್ನು ನೆನಪಿಸಿಕೊಳ್ಳುವುದು, ಇಂಗ್ಲೀಷ್ ಮತ್ತು ತೆಲುಗಿನಲ್ಲಿ 6 ನರ್ಸರಿ ಪ್ರಾಸಗಳನ್ನು ಪಠಿಸಿ ಅಸಾಧಾರಣ ಸಾಮಥ್ರ್ಯ ತೋರಿಸಿದ್ದಾರೆ. ಇಂತಹ ಮುದ್ದಾದ ಚ್ಯೂಟಿಯಾದ ಮಕ್ಕಳನ್ನು ಕಂಡರೆ ವಿಶೇಷವಾಗಿ ಅಜ್ಜ, ಅಜ್ಜಿಯರಿಗೆ, ಮನೆಯ ಸದಸ್ಯರಿಗೆಲ್ಲ ಪ್ರೀತಿ ತಾನಾಗಿ ಉಕ್ಕುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದನ್ನು ಈಕೆ ನಿಜಕ್ಕೂ ಸಾರ್ಥಕ ಪಡಿಸಿಕೊಂಡಿದ್ದಾಳೆ. ಇದಕ್ಕೆ ಪೋಷಕರು ಸಹ ನೀರೆದು ಪೋಷಿಸುತ್ತಿದ್ದಾರೆ. ತಮ್ಮ ಮೊಮ್ಮಗಳ ಈ ಸಾಧನೆಯ ಬಗ್ಗೆ ಅವಳ ತಾತಾ ಅಜ್ಜಿಯವರಾದ ಜಯಶ್ರೀ, ವಿಜಯೇಂದ್ರ ಮತ್ತು ಡಾ.ಕೆ.ಎಸ್.ರಾಮಕೃಷ್ಣ ಮತ್ತು ಸುಮಾರವರು ಸಂತಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಯಸ್ಸಿಗೂ ಮೀರಿದ ಪ್ರತಿಭೆ ಅನಾವರಣಗೊಂಡಿದೆ. ಆಕೆ ನಿಜಕ್ಕೂ ಪುಟ್ಟ ಪುಟಾಣಿಗಳಿಗೆ ದಾರಿ ದೀಪ, ಆಶಾಕಿರಣ ಸ್ಪೂರ್ತಿಯ ಚಿಲುಮೆ.!! ಎಂದಿಗೂ ಬತ್ತದ ಕಣಜ.!