ಆ.20ಕ್ಕೆ ರೈತರಿಂದ ವಿಧಾನಸೌಧ ಮುತ್ತಿಗೆ

ಸಂಜೆವಾಣಿ ನ್ಯೂಸ್
ಮೈಸೂರು.ಆ.17:-
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಆ.20ರಂದು ವಿಧಾನಸೌಧ ಮುತ್ತಿಗೆ ಹಾಗೂ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.


ನಗರದ ಪಿಡಬ್ಲ್ಯೂಡಿ ಗೆಸ್ಟ್ ಹೌಸ್ ನಲ್ಲಿ ಪತಿಕಾಗೋಷ್ಠಿ ನಡೆಸಿ ಮಾತನಾಡಿದರು. ಆ.15ರಂದು ದೇಶಕ್ಕೆ ಸ್ವತಂತ್ರ ಬಂದಿದೆ ಎಂದು ನಾವೆಲ್ಲರೂ ಸ್ವತಂತ್ರರು ಎಂದು ದೇಶವು ವಿಜೃಂಭಣೆಯಿಂದ ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತದೆ. ಆದರೆ, ರೈತರ ಪಾಲಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಯಾವುದೇ ಸ್ವಾತಂತ್ರ್ಯ ಇಲ್ಲ ಈ ಕಾರಣ ರೈತರಿಗೆ ಸ್ವತಂತ್ರ ಬಂದಿಲ್ಲ. ಪ್ರಸಕ್ತ ಸಾಲಿನ ಪ್ರತಿ ಟನ್ ಕಬ್ಬಿಗೆ 4500 ನಿಗದಿ ಮಾಡಬೇಕು. ಕಟಾವು ಮತ್ತು ಸಾಗಾಣಿಕೆಯನ್ನು ಸಕ್ಕರೆ ಕಾರ್ಖಾನೆಗಳು ಬರಿಸಬೇಕು.ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಜಾರಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಇಳುವರಿಯ ಮೋಸ ತಪ್ಪಿಸಲು ರೈತರು ಹಾಗೂ ತಜ್ಞರ ಸಮಿತಿ ರಚಿಸಬೇಕು. ತೂಕದಲ್ಲಿ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಬೇಕು. ಕಳೆದ ಸಾಲಿನ 950 ಕೋಟಿ ರೂ ರೈತರಿಗೆ ಬಾಕಿ ನೀಡಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮನಸ್ಸು ಇಚ್ಚೆ ತಮಗೆ ಬೇಕಾದ ರೀತಿ ಸಂಬಳ ಸಾರಿಗೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದರು.


ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಎಲ್ಲಾ ರಾಜ್ಯ ಸರ್ಕಾರಗಳು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಎಂ.ಎಸ್ ಸ್ವಾಮಿನಾಥನ್ ವರದಿ ಜಾರಿಗೆ ಬರಬೇಕು. ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಜಾರಿಗೆ ತರಬೇಕೆಂಬುದು ಸೇರಿ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಒತಾಯಿಸಿ ಆ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ರೈತ ಸಂಘಟನೆಗಳ ಒಕ್ಕೂಟದೊಡನೆ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು. ರಾಜ್ಯ ಗೌರವಾಧ್ಯಕ್ಷ ಅಂಡುವಿನಹಳ್ಳಿ ಎಚ್.ಎಸ್.ರಾಜು, ಖಜಾಂಚಿ ಕೆರೆಹುಂಡಿ ರಾಜಣ್ಣ, ಸಂಚಾಲಕ ಹನುಮಯ್ಯ, ಜಿಲ್ಲಾ ಉಪಾಧ್ಯಕ್ಷ ದೇವನೂರು ನಾಗೇಂದ್ರಸ್ವಾಮಿ, ಗೌಡಿಕೆ ಶಿವಣ್ಣ, ನಂದಿಗುಂದಪುರ ಸಿದ್ದಪ್ಪ, ಅಂಡುವಿನಹಳ್ಳಿ ಮಹೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.