Home ಜಿಲ್ಲೆ ಮಂಗಳೂರು ಆ.೨೩; ಅಡಿಕೆ-ಕಾಫಿ ಬೆಳೆಗಾರರ ಸಮಾವೇಶ- ಮಾಹಿತಿ ಶಿಬಿರ

ಆ.೨೩; ಅಡಿಕೆ-ಕಾಫಿ ಬೆಳೆಗಾರರ ಸಮಾವೇಶ- ಮಾಹಿತಿ ಶಿಬಿರ

ಪುತ್ತೂರು: ಅವಿಭಜಿತ ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟ ಹಾಗೂ ಪುತ್ತೂರಿನ ಸುದ್ದಿ ಅರಿವು ಮಾಹಿತಿ ಕೇಂದ್ರದ ಸಹಯೋಗದಲ್ಲಿ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಂದು ದಿನದ ಮಾಹಿತಿ ಶಿಬಿರ ಹಾಗೂ ಸಮಾವೇಶ ಆ.೨೩ ರಂದು ದರ್ಬೆ ಸುಭದ್ರ ಸಭಾ ಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಶಶಿಕುಮಾರ್ ಪಡಾರು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅಡಿಕೆ ಮತ್ತು ಕಾಳುಮೆಣಸು ಪ್ರಮುಖ ಬೆಳೆಯಾಗಿಸಿಕೊಂಡ ರೈತವರ್ಗ ಹಾಗೂ ಈ ಬಗ್ಗೆ ಭವಿಷ್ಯದ ಚಿಂತನೆ ನಡೆಸುವವರ ಕುರಿತು ಸಮಾವೇಶ ನಡೆಯಲಿದೆ. ಕಾರ್ಯಕ್ರಮವನ್ನು ಬೆಳಿಗ್ಗೆ ೯.೩೦ಕ್ಕೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದಾರೆ. ಸ್ಪೈಸಿ ಬೋರ್ಡಿನ ವಿಶ್ರಾಂತ ವಿಜ್ಞಾನಿ ಡಾ.ವೇಣುಗೋಪಾಲ್ ಮೈಸೂರು ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಅಡಿಕೆ ಕೃಷಿ ನಿರ್ವಹಣೆ, ಗೊಬ್ಬರ ನಿರ್ವಹಣೆ ಹಾಗೂ ಎಲೆಚುಕ್ಕಿ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ಒದಗಿಸಲಿದ್ದಾರೆ. ಸೆವೆನ್ ಬೀನ್ ಟೀಂನ ಮುಖ್ಯಸ್ಥ ಡಾ. ಎಚ್.ಎಸ್. ಧರ್ಮರಾಜ್ ಸಕಲೇಶಪುರ ಅವರು ಕಾಳುಮೆಣಸು ಹಾಗೂ ಕಾಫಿ ಕೃಷಿ ಪೋಷಕಾಂಶಗಳ ನಿರ್ವಹಣೆ ಬಗೆಗೆ ಸಮಗ್ರ ಮಾಹಿತಿ ನೀಡುವರು. ಅಡಿಕೆ ಪತ್ರಿಕೆ ಪ್ರಕಾಶ ಪಡಾರು ರಾಮಕೃಷ್ಣ ಶಾಸ್ತಿ ಅಡಿಕೆ ಜೊತೆ ಮಿಶ್ರ ಬೆಳೆಯಾಗಿ ಕೊಕ್ಕೋ ಬೆಳೆಯುವ ಮತ್ತು ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ. ಮಲೆನಾಡಿನ ಬಾಬುಲ್ ಸಾಬ್ ಅವರು ದೂಪದ ಗಿಡಗಳಲ್ಲಿ ಕಾಳುಮೆಣಸು ಜೊತೆಗೆ ಮಿಶ್ರ ಬೆಳೆಯಾಗಿ ಕಾಫಿ, ದೂಪದ ಅಂಟು ತೆಗೆಯುವಿಕೆ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.
ಪ್ರಗತಿಪರ ಕೃಷಿಕರಾದ ಅಜಿತ್ ಪ್ರಸಾದ್ ರೈ ಹಾಗೂ ಚಂದ್ರಶೇಖರ ತಾಳ್ತಜೆ. ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೆ., ಹಿರಿಯ ಪತ್ರಕರ್ತ ಡಾ.ಯು.ಪಿ.ಶಿವಾನಂದ, ಹವ್ಯಾಸಿ ಅಡಿಕೆ ಮಾರುಕಟ್ಟೆ ಸಾಮಾಜಿಕ ಜಾಲತಾಣ ವಿಶ್ಲೇಷಕ ಮಹೇಶ್ ಅಜ್ಜಿಮನೆ ವೇದಿಕೆಯಲ್ಲಿ ಗೌರವ ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ರೈತ ರತ್ನ ಪ್ರಶಸ್ತಿ ಸ್ವೀಕರಿಸಿರುವ ಕಲ್ಮಡ್ಕದ ಟಿ.ಆರ್.ಎಸ್. ಫಾರ್ಮ್‌ನ ಟಿ.ಆರ್.ಸತೀಶ್ಚಂದ್ರ ತೊಟ್ಟೆತ್ತೋಡಿ, ಹವ್ಯಾಸಿ ಹವಾಮಾನ ವೀಕ್ಷಕ ಸಾಯಿಶೇಖರ ಬಿ.ಕರಿಕ್ಕಳ, ಮುಳಿಯದ ಬೈಕುಂಜೆ ಫಾರ್ಮ್ ಬಿ.ಜಿ.ಬಲರಾಮ್ ಮತ್ತು ಎಚ್.ಎಸ್.ಧರ್ಮರಾಜ್ ಅವರಿಗೆ ಸನ್ಮಾನ ಕಾರ್ಯ ನಡೆಯಲಿದೆ.
ಅಪರಾಹ್ನ ಭೋಜನದ ನಂತರ ಯುವ ಕೃಷಿಕರ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು, ಐಪಿಎಲ್ ಮುಖ್ಯಸ್ಥ ಸತ್ಯಪ್ರಕಾಶ್ ಅಧ್ಯಕ್ಷತೆ ವಹಿಸಿಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಕಿಸಾನ್ ಆಗ್ರೋದ ಅಭಿಜಿತ್, ಪ್ರಗತಿಪರ ಕೊಕ್ಕೋ ಬೆಳೆಗಾರ ನವೀನಕೃಷ್ಣ ಶಾಸ್ತಿ, ಅನನಾಸು ಬೆಳೆಗಾರ ವಿಶ್ವೇಶ್ವರ ಭಟ್ ಪಂಜೆ, ಮುಣ್ಚಿಕಾನ ಕುರುವೇರಿ ಕ್ಯಾಶ್ ಇಂಡಸ್ಟ್ರೀಸ್‌ನ ವಿಶ್ವಕೇಶವ, ಪ್ರಗತಿಪರ ಯುವ ಅಡಿಕೆ ಬೆಳೆಗಾರ ಸುಧೀರ್ ಕೃಷ್ಣ ಪಡಾರು ಭಾಗವಹಿಸಿ ಕೋಕ್ಕೋ ಮೌಲ್ಯವರ್ಧನೆ, ಹಲಸು ಮೌಲ್ಯವರ್ಧನೆ, ಗೋಡಂಬಿ ಮೌಲ್ಯವರ್ಧನೆ, ಚಾಕೋಲೇಟ್ ಉತ್ಪಾದನೆ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಗಿಡಗಳ ಪ್ರದರ್ಶನ ಹಾಗೂ ಮಾರಾಟ
ಕಾರ್ಯಕ್ರಮದಲ್ಲಿ ವೈವಿಧ್ಯಮಯ ಮಾವಿನ ಗಿಡಗಳು, ಹಲಸಿನ ಗಿಡಗಳು, ಶ್ರೀಗಂಧ, ರಕ್ತಚಂದನದ ಗಿಡಗಳು, ರಾಮ ಫಲ, ಸೀತಾಫಲ, ಚಿಕ್ಕು, ದಾಳಿಂಬೆ, ಜಾಯಿಕಾಯಿ, ಮ್ಯಾಂಗೋಸ್ಟಿನ್, ಕಿತ್ತಳೆ, ಲಿಂಬೆ, ನೇರಳೆ, ಮೂಸುಂಬಿ ಮೊದಲಾದ ಗಿಡಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಜತೆಗೆ ಹಲವು ಬಗೆಯ ಗೊಬ್ಬರ ತಯಾರಿಕ ಸಂಸ್ಥೆಗಳ ಮಳಿಗೆ, ಕಾಳುಮೆಣಸು ಕೊಯ್ಯಲು ಏರುವ ಏಣಿ, ಕಾಳುಮೆಣಸು ಬಿಡಿಸುವ ಯಂತ್ರ, ಶುದ್ದೀಕರಿಸುವ ಯಂತ್ರಗಳ ಮಳಿಗೆ, ಕಾಳುಮೆಣಸು ಬೆಳೆಯುವ ಸಿಮೆಂಟ್ ಕಂಬಗಳ ಮಳಿಗೆ, ಮಂಗಗಳ ಹಾವಳಿ ತಡೆಗಟ್ಟುವ ಸಲಕರಣೆಗಳ ಮಳಿಗೆ, ಹನಿನೀರಾವರಿ ವ್ಯವಸ್ಥೆಯ ಮಳಿಗೆ, ದೋಟಿ ಮಳಿಗೆಗಳು
ಕ್ಯಾಂಪ್ಕೋ ಚಾಕಲೇಟ್ ಮಳಿಗೆ, ವಿವಿಧ ಬಗೆಯ ಗೊಬ್ಬರಗಳ ಮಳಿಗೆಗಳು, ಚಾಕಲೇಟ್ ಮಳಿಗೆ, ಉಪಯುಕ್ತ ಮಳಿಗೆಗಳು ಇರಲಿವೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕ ಸಮಿತಿಯ ಅಜಿತ ಪ್ರಸಾದ್ ರೈ, ಸೇಡಿಯಾಪು ಜನಾರ್ದನ ಭಟ್, ಗೋಪಾಲಕೃಷ್ಣ ಭಟ್, ಜಿ.ಕೆ. ಪ್ರಸನ್ನ, ಶಶಾಂಕ್ ಉಪಸ್ಥಿತರಿದ್ದರು.