ಪುತ್ತೂರು: ಎಸ್‌ಎನ್‌ಆರ್ ರೂರಲ್ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾಚೇತನ ಸಭಾಂಗಣದಲ್ಲಿ ಆ. ೧೪ ರಂದು ಪೂರ್ವಾಹ್ನ ‘ಶೀಂಟೂರು ಸ್ಮೃತಿ -೨೦೨೫’ ಕಾರ್ಯಕ್ರಮ ನಡೆಯಲಿದೆ ಎಂದು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸಹಕಾರರತ್ನ ಕೆ. ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಸೇನಾನಿ, ಶಿಕ್ಷಕ, ಸಹಕಾರಿ ದಿ. ಶೀಂಟೂರು ನಾರಾಯಣ ರೈ ಅವರ ಸ್ಮರಣೆಯಲ್ಲಿ ೧೪ ನೇ ವರ್ಷದ ಸ್ಥಾಪಕರ ದಿನಾಚರಣೆಯು ಶೀಂಟೂರು ಸ್ಮೃತಿ ಎಂಬ ಶಿರೋನಾಮೆಯಲ್ಲಿ ಆಚರಿಸಲಾಗುತ್ತಿದ್ದು, ಇದೇ ಸಂದರ್ಭ ಶೀಂಟೂರು ಸನ್ಮಾನ ಮತ್ತು ಶಿಷ್ಯವೇತನ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ನನ್ನ ತಂದೆಯವರಾದ ದಿವಂಗತ ಶೀಂಟೂರು ನಾರಾಯಣ ರೈ ಅವರು ೨ನೇ ಮಹಾಯುದ್ಧದಲ್ಲಿ ಭಾರತೀಯ ಸೇನಾನಿಯಾಗಿ ಬರ್ಮಾದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸೇನಾ ನಿವೃತ್ತಿ ಬಳಿಕ ಶಿಕ್ಷಕ ವೃತ್ತಿ, ಸಹಕಾರಿರಂಗ ಹಾಗೂ ಕೃಷಿಕರಾಗಿ ಹೆಸರು ಮಾಡಿದವರು. ಅವರ ಪ್ರೇರಣೆಯಿಂದ ಸವಣೂರು ವಿದ್ಯಾಗಂಗೋತ್ರಿಯಲ್ಲಿ ೨೦೦೧ರಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ ಎಂದು ಸೀತಾರಾಮ ರೈ ಹೇಳಿದರು.
ಸಂಸ್ಥೆಯ ದಶಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ವಿನಯ ಹೆಗ್ಡೆ ಪ್ರಸ್ತಾಪದ ಮೂಲಕ ಚಿಂತನೆ ಆರಂಭವಾಯಿತು. ಅವರು ಹಾಗೂ ಎಜೆ ಆಸ್ಪತ್ರೆಯ ಸಂಸ್ಥಾಪಕ ಡಾ.ಎ.ಜೆ.ಶೆಟ್ಟಿ ಸಹಿತ ಹಲವರು ಇದರ ಪೋಷಕರಾಗಿದ್ದಾರೆ. ದಾನಿಗಳ ಕೊಡುಗೆಯ ಬಡ್ಡಿ ಹಣವನ್ನು ಶಿಷ್ಯವೇತನದ ರೂಪದಲ್ಲಿ ನಮ್ಮ ಸಂಸ್ಥೆಯ ವಿವಿಧ ತರಗತಿಗಳ ೧೦ ಪ್ರತಿಭಾವಂತ ಹಾಗೂ ಆರ್ಥಿಕ ಸಂಕಷ್ಟದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಶೀಂಟೂರು ಸ್ಮೃತಿ ಕಾರ್ಯಕ್ರಮದಲ್ಲಿ ಒಂದು ವರ್ಷ ಒಬ್ಬ ಸೇನಾನಿ ಮತ್ತು ಇನ್ನೊಂದು ವರ್ಷದಲ್ಲಿ ಶಿಕ್ಷಕರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ವಿವರ
ಆ.೧೪ ರಂದು ೧೦ ಗಂಟೆಗೆ ‘ಶೀಂಟೂರು ಸ್ಮೃತಿ” ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ನೆರವೇರಿಸಲಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಆಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶೀಂಟೂರು ಸನ್ಮಾನ ಪುರಸ್ಕಾರವನ್ನು ನಿವೃತ್ತ ಕರ್ನಲ್ ರಾಜೇಶ್ ಹೊಳ್ಳ ಎಸ್. ಎಂ. ಅವರಿಗೆ ಸ್ವರ್ಣೋದ್ಯಮಿ ಜಿ. ಎಲ್. ಬಲರಾಮ ಆಚಾರ್ಯ ಅವರು ನೀಡಿ ಗೌರವಿಸಲಿದ್ದಾರೆ.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮೆನೇಜರ್ ಸೂಂತೋಡು ಹೂವಯ್ಯ ಅವರು ಶೀಂಟೂರು ಸಂಸ್ಮರಣೆ ಉಪನ್ಯಾಸ ಮಾಡಲಿದ್ದಾರೆ. ಎಸ್‌ಎನ್‌ಆರ್ ರೂರಲ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎನ್. ಸುಂದರ ರೈ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕೆ. ಸೀತಾರಾಮ ರೈ ಅವರು ತಿಳಿಸಿದರು.
ಗೋಷ್ಠಿಯಲ್ಲಿ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಶ್ವಿನ್ ಎಲ್. ಶೆಟ್ಟಿ, ಟ್ರಸ್ಟಿಗಳಾದ ಎನ್.ಸುಂದರ ರೈ ಸವಣೂರು, ರಶ್ಮಿ ಆಶ್ವಿನ್ ಶೆಟ್ಟಿ ಹಾಗೂ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು.
ವಿತರಣೆ


























