ಸಂಜೆವಾಣಿ ವಾರ್ತೆ
ಹುಣಸೂರು,ಸೆ.18:– ನಗರದ ಹೈಟೆಕ್ ಆಸ್ಪತ್ರೆಯ ಉಳಿಕೆ ಕಾಮಗಾರಿಗೆ ಸರ್ಕಾರದಿಂದ 9.5 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಆರಂಭಗೊಂಡಿದ್ದು, ಇನ್ನು ಎಂಟು ತಿಂಗಳೊಳಗೆ ಆಸ್ಪತ್ರೆ ಆರಂಭಗೊಳ್ಳಲಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ತಿಳಿಸಿದರು.
ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು ಕಾಮಗಾರಿ ಪರಿಶೀಲಿಸಿ ಅಧಿಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪತ್ರಿಕೆಗಳೊಂದಿಗೆ ಮಾತನಾಡಿದ ಅವರು ಇದೀಗ ಬಂದಿರುವ ಅನುದಾನದಲ್ಲಿ ಆಸ್ಪತ್ರೆ ಆವರಣಕ್ಕೆ ಕಾಂಪೌಂಡ್ ನಿರ್ಮಾಣ, ಶವಗಾರ, ನಾಲ್ಕು ಕಡೆ ಲಿಫ್ಟ್, ಸಿ.ಸಿ.ಟಿ.ವಿ, ಫೈರ್ ಸೇಫ್ಟಿ, ಕೋಲ್ಡ್ ಸ್ಟೋರೇಜ್ ಸೇರಿದಂತೆ ಅತ್ಯಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹಳೆಯ ಆಸ್ಪತ್ರೆಯಲ್ಲಿರುವ ಉಪಕರಣಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಬಗ್ಗೆ ಪರಿಶೀಲಿಸುವಂತೆ ಆಡಳಿತ ಅಧಿಕಾರಿ ಮಹದೇವಸ್ವಾಮಿಗೆ ಸೂಚಿಸಿದರು.
ಈ ವೇಳೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿಗಳಾದ ನಾಗರಾಜ್, ಡಾಕ್ಟರ್ ದರ್ಶನ್, ನಗರಸಭೆ ಅಧ್ಯಕ್ಷ ಮಾಲಿಕ್ ಪಾಷಾ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಸದಸ್ಯರಾದ ರಾಣಿ ಪೆರುಮಾಳ್ ಪೌರಾಯುಕ್ತೆ ಮಾನಸ ಮುಖಂಡರಾದ ಸತೀಶ್ ಪಾಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.




























