ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.17: ನನ್ನ ಸ್ವಗ್ರಾಮ ಹರಳಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಾಜ್ಯದಲ್ಲಿಯೇ ಎರಡನೇ ಗಣಕೀಕೃತ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ತಮ್ಮ ಸ್ವಗ್ರಾಮ ಹರಳಹಳ್ಳಿ ಗ್ರಾಮದಲ್ಲಿ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರು ಕಟ್ಟಿ ಬೆಳೆಸಿಕೊಂಡು ಬಂದಿರುವ ಸಹಕಾರ ಸಂಘವನ್ನು ಇನ್ನೂ ಹೆಚ್ಚಿನ ಪ್ರಗತಿಯಡೆಗೆ ಕೊಂಡೋಯ್ಯಬೇಕಾದುದು ನಮ್ಮ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ. ಸರ್ಕಾರ ನೀಡಿದ ಸಾಲ ನೈಜ ಫಲಾನುಭವಿಗೆ ತಲುಪಬೇಕೆಂಬ ಏಕಮೇವ ಉದ್ದೇಶದಿಂದ ಕಳೆದ 10-15 ವರ್ಷಗಳಿಂದಲೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿಕೊಂಡು ಬರಲಾಗಿದೆ. ನಾನೂ ಸಹ ಅಧ್ಯಕ್ಷನಾಗಿ ಸಂಘವನ್ನು ಅಭಿವೃದ್ದಿಯತ್ತ ನಡೆಸಿಕೊಂಡು ಹೋಗಿದ್ದೇನೆ. ಸ್ವಂತ ನಿವೇಶನ ಸ್ವಂತ ಕಟ್ಟಡ, ಬ್ಯಾಂಕ್, ರಸಗೊಬ್ಬರ ಮಾರಾಟ ಕೇಂದ್ರ ಸೇರಿದಂತೆ ವಿವಿಧ ಉದ್ದೇಶಗಳನ್ನು ಇಟ್ಟುಕೊಂಡು ಸಂಘದ ಏಳಿಗೆಗೆ ಕಳೆದ 3-4 ಆಡಳಿತ ಮಂಡಳಿಯ ಸದಸ್ಯರುಗಳು ಶ್ರಮಿಸಿದ್ದಾರೆ.
ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲ್ಲೂಕಿನಲ್ಲಿ ಮಾದರಿ ಸಂಘವಾಗಿ ಬೆಳೆದಿದೆ. 73 ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರ ಸಬಲೀಕರಣದ ಕೆಲಸ ಮಾಡುತ್ತಿದೆ. ಏಳೆಂಟು ಕೋಟಿ ಮುಂಗಡ ನೀಡಿದೆ. ಒಟ್ಟಾರೆ ಸಂಘವು ಒಂದು ಕೋಟಿಗೂ ಅಧಿಕ ಲಾಭದಲ್ಲಿ ನಡೆಯುತ್ತಿದೆ. ಅಲ್ಲದೇ ರಸಗೊಬ್ಬರ ಕಂಪನಿಗಳಿಂದ ನೇರವಾಗಿ ಗೊಬ್ಬರ ಖರೀದಿಸುವ 3-4 ಸೊಸೈಟಿಗಳಲ್ಲಿ ನಮ್ಮದೂ ಒಂದು. ಸದಸ್ಯರು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದರೆ ಯಾವುದೇ ಸಹಕಾರಿ ಸಂಘಗಳು ಲಾಭದತ್ತ ಸಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಈರೇಗೌಡ, ಉಪಾದ್ಯಕ್ಷೆ ಭಾಗ್ಯಮ್ಮ, ನಿರ್ದೇಶಕರಾದ ಹೆಚ್.ಟಿ.ಲೋಕೇಶ್, ಜೆ.ಹರೀಶ್, ಪ್ರೇಮ್‍ಕುಮಾರ್, ಗುರುಪ್ರಸಾದ್, ಚಂದ್ರಶೇಖರ್, ರಮೇಶ್, ದೇವಮ್ಮ, ತಿಮ್ಮಯ್ಯ, ಮಂಜುಳ, ಆದಿಲ್‍ಪಾಷ, ಸಿಡಿಓ ಭರತ್, ಕಾರ್ಯನಿರ್ವಹಣಾಧಿಕಾರಿ ಆದರ್ಶ, ಸಿಬ್ಬಂದಿಗಳಾದ ಆಶಾ, ಅರುಣ್‍ಕುಮಾರ್, ಅನುರತಿ ಸೇರಿದಂತೆ ಸಂಘದ ಸದಸ್ಯರುಗಳು ಹಾಜರಿದ್ದರು.



























