ಆಲಿಯಾ ಭಟ್ ಮನೆಗೆ ಮೈಸೂರಿನ ಗಣಪ

ಸಂಜೆವಾಣಿ ನ್ಯೂಸ್
ಮೈಸೂರು:ಅ.16:-
ಬಾಲಿವುಡ್‍ನ ತಾರಾ ದಂಪತಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಹೊಸ ಮನೆಯ ಗೃಹ ಪ್ರವೇಶ ಸದ್ಯದಲ್ಲೇ ನಡೆಯಲಿದ್ದು, ಈ ಮನೆಗೆ ಶಿಲ್ಪಿ ಅರುಣ್ ಯೋಗಿರಾಜ್ ಕೈಚಳಕದಲ್ಲಿ ಗಣಪನ ಮೂರ್ತಿ ಸಿದ್ಧಗೊಂಡಿರುವುದು ವಿಶೇಷ.


ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಕೆತ್ತನೆಯಲ್ಲಿ ನಾಲ್ಕು ಅಡಿ ಗಣಪ, ಮೂರಡಿ ಪೀಠ ಉಳ್ಳ ವಿಗ್ರಹ ಮೂಡಿಬಂದಿದ್ದು, ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ಕೆತ್ತನೆ ಮಾಡಲಾಗಿದೆ. ಏಕಶೀಲೆಯಲ್ಲಿ ಈ ಮೂರ್ತಿ ಕೆತ್ತಲ್ಪಟ್ಟಿದೆ. ಕಳೆದ ಆರು ತಿಂಗಳಿಂದ ನಿರಂತರ ಕೆತ್ತನೆ ಕಾರ್ಯ ನಡೆಯುತ್ತಿದ್ದು, ಅ.17ರಂದು ಆಲಿಯಾ ಭಟ್ ಕುಟುಂಬಸ್ಥರಿಂದ ಪೂಜೆ ನಿಗಧಿಗೊಂಡಿದೆ.


ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತನೆ ಗಮನಿಸಿದ್ದ ತಾರಾ ದಂಪತಿ ತಮ್ಮ ಮನೆಗೆ ಗಣಪ ಮೂರ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ಮುಂಬೈಗೆ ಕರೆಸಿಕೊಂಡು ಈ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಯಿತು. ಮನೆಯ ಸ್ಥಳ ಎಲ್ಲವನ್ನೂ ಗಮನಿಸಿ ಬಂದಿದ್ದೆ. ಆ ಮನೆಗೆ ಹೊಂದಿಕೊಳ್ಳುವಂತೆ ಗಣಪನ ಮೂರ್ತಿ ಕೆತ್ತನೆ ಮಾಡಲಾಗಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ತಿಳಿಸಿದರು.