ಸಂಜೆವಾಣಿ ವಾರ್ತೆ
ತಿ.ನರಸೀಪುರ ಆ.9- ಮೈಸೂರು ನಗರದ ಶ್ರೀ ಆದಿ ಚುಂಚನಗಿರಿ ಶಾಖಾ ಮಠದಲ್ಲಿ ಗುರುವಾರ ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ದಸಂಸ( ಭೀಮವಾದ)ಯ ರಾಜ್ಯ ವಿಭಾಗೀಯ ಸಂಚಾಲಕ ಡಾ.ಆಲಗೂಡು ಎಸ್. ಚಂದ್ರಶೇಖರ್ ಅವರನ್ನು ಸೋಮೇಶ್ವರನಾಥ ಸ್ವಾಮೀಜಿಯವರು ಸನ್ಮಾನಿಸಿ, ಆಶೀರ್ವದಿಸಿದರು.
ರಾಜ್ಯದ ಅತ್ಯುತ್ತಮ ಶ್ರೇಷ್ಠ ನಾಗರೀಕ ಸೇವಾ ಪ್ರಶಸ್ತಿ “ಕರ್ನಾಟಕ ಭೂಷಣ” ಬಿರುದು ಸ್ವೀಕರಿಸಿದ ವಿಷಯವನ್ನು ತಿಳಿದ ಶ್ರೀಗಳು ತಮ್ಮ ಆಪ್ತರ ಮೂಲಕ ಮಠಕ್ಕೆ ಪಟ್ಟಣದ ಆಲಗೂಡು ಗ್ರಾಮದವರಾದ ಎಸ್. ಚಂದ್ರಶೇಖರ್ ಅವರನ್ನು ಮಠಕ್ಕೆ ಆಹ್ವಾನಿಸಿ ಸನ್ಮಾನಿಸಿದರು.
ಬಳಿಕ ಸೋಮೇಶ್ವರನಾಥ ಸ್ವಾಮೀಜಿ ಅವರು ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳು ಶುದ್ಧವಿರಬೇಕು. ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೆ ಮಾನವೀಯತೆ ಬಂಧುತ್ವದ ಮನೋಭಾವನೆ ಇಟ್ಟುಕೊಂಡು ಜಾತ್ಯತೀತವಾಗಿ ಯಾವುದೇ ಧರ್ಮ, ವರ್ಗ ಸಮುದಾಯದ ಬಗ್ಗೆ ತಾರತಮ್ಯವಿಲ್ಲದೆ ಅನ್ಯಾಯದ ವಿರುದ್ಧ ಯಾವುದೇ ಪ್ರಭಾವ ಒತ್ತಡಕ್ಕೆ ಮಣಿಯದೆ ಪ್ರತಿಭಟಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು. ಈ ದೆಸೆಯಲ್ಲಿ ಆಲಗೂಡು ಚಂದ್ರಶೇಖರ್ ಅವರು ಸಮಾಜದ ಧ್ವನಿಯಾಗಿ, ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ಶ್ರೀ ಆದಿಚುಂಚನಗಿರಿ ಕಾಲಭೈರವೇಶ್ವರನ ಶ್ರೀರಕ್ಷೆ ಸದಾ ಕಾಲ ಇರಲಿ ಎಂದು ಆಶೀರ್ವದಿಸಿದರು.
ಕೆಂಪಯ್ಯನಹುಂಡಿ ಗ್ರಾಮದ ಹಿರಿಯ ಮುಖಂಡ ಚನ್ನೇಗೌಡ, ಬಸವರಾಜು ಹಾಗೂ ಶಿವಪ್ರಸಾದ್ ಇದ್ದರು.




























