ಆರ್‌ಎಸ್‌ಎಸ್- ಆರ್‌ಎಸ್‌ಎಸ್ ನಡುವೆ ಕಿತ್ತಾಟ


ಬೆಂಗಳೂರು, ಸೆ. ೧- ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವುದು ಆರ್‌ಎಸ್‌ಎಸ್ ವರ್ಸಸ್ ಆರ್‌ಎಸ್‌ಎಸ್ ಕಿತ್ತಾಟ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಶವಗಳ ಹೂತಿರುವ ಪ್ರಕರಣದ ಬಗ್ಗೆ ಎಸ್‌ಐಟಿ ರಚನೆಯಾದಾಗ ಸುಮ್ಮನಿದ್ದ ಬಿಜೆಪಿಯವರು ಈಗ ಏಕಾಏಕಿ ಧರ್ಮಸ್ಥಳ ಚಲೋ ಎನ್ನುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಈ ಹಿಂದೆ ಬಿಜೆಪಿಯವರೇ ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದ್ದರು. ಈಗ ಧರ್ಮಸ್ಥಳ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಹಿಂದೆ ಸಿಬಿಐ ಮಾನವ ಸಂಪನ್ಮೂಲ ಕೊರತೆ ಬಗ್ಗೆ ಪತ್ರ ಬರೆದಿತ್ತು ಎಂದು ಪತ್ರದ ಪ್ರತಿಯನ್ನು ಅವರು ಹಂಚಿಕೊಂಡಿದ್ದಾರೆ.
ಸಿಬಿಐ ಮುಂದೆ ರಾಜ್ಯದ ೭೪ ಪ್ರಕರಣಗಳ ತನಿಖೆ ಬಾಕಿ ಇದೆ. ಈ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.