
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.09: ಈ ತಿಂಗಳ 25ರಿಂದ 28ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ “ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ” ಎಂಬ ಧ್ಯೇಯವಾಕ್ಯದಡಿ ನಡೆಯಲಿರುವ ವಿಶ್ವ ಆಯುರ್ವೇದ ಸಮ್ಮೇಳನ ಕುರಿತು ಜಾಗೃತಿ ಮೂಡಿಸಲು ದಕ್ಷಿಣ ಭಾರತದ ಏಳು ರಾಜ್ಯಗಳನ್ನು ಸಂಚರಿಸುತ್ತಿರುವ ಆಯುರ್ವೇದ ರಥಯಾತ್ರೆಗೆ ಇಂದು ನಗರದಲ್ಲಿ ಬೀಳ್ಕೊಡಲಾಯ್ತು.
ಬೆಳಿಗ್ಗೆ ನಗರಕ್ಕೆ ರಥ ಪ್ರವೇಶಿಸಿದಾಗ, ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಆಸ್ಪತ್ರೆಯ ಮುಂಭಾಗದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸ್ವಾಗತಿಸಿದರು. ರಥಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಿ ರಥಯಾತ್ರೆಯ ಮಹತ್ವವನ್ನು ಸಾರಿದರು.
ಕಾರ್ಯಕ್ರಮದ ಉದ್ದೇಶವನ್ನು ರಥದ ವಕ್ತಾರರಾದ ಡಾ. ಮಂಜುನಾಥ್ ಕೆ.ಎಸ್. ವಿವರಿಸಿದರು. ವಿಶ್ವ ಆಯುರ್ವೇದ ಸಮ್ಮೇಳನದ ಅಗತ್ಯತೆ, ಆಯುರ್ವೇದದ ಜಾಗತಿಕ ಪ್ರಸ್ತುತತೆ ಬಗ್ಗೆ ತಿಳಿಸಿದರು.
ಡಾ. ರಾಜಶೇಖರ ಗಾಣಿಗೇರ ಮಾತನಾಡಿ, ಆಯುರ್ವೇದದ ಪರಂಪರೆ, ವಿಜ್ಞಾನ ಮತ್ತು ಭವಿಷ್ಯದ ಅವಕಾಶಗಳ ಬಗ್ಗೆ ಹಿತವಚನ ನೀಡಿದರು.
ಡಾ. ಶಿವು ಅರಿಕೇರಿ ಮಾತನಾಡಿ, ಪಂಡಿತ ತಾರಾನಾಥರ ಆಯುರ್ವೇದ ಕ್ಷೇತ್ರಕ್ಕೆ ನೀಡಿದ ಮಹತ್ತರ ಕೊಡುಗೆಗಳನ್ನು ಸ್ಮರಿಸಿದರು. ಪಂಡಿತ ತಾರಾನಾಥರು ಆಯುರ್ವೇದದ ಬೆಳವಣಿಗೆಗೆ ನೀಡಿದ ಸೇವೆಗಳು ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಗೂ ಆದರ್ಶವಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್, ಡಾ. ರವಿ ಚವಾಣ್ ಮೊದಲಾದವರು ಇದ್ದರು. ನಂತರ ರಥವನ್ನು ಆಂದ್ರಪ್ರದೇಶಕ್ಕೆ ಬೀಳ್ಕೊಡಲಾಯ್ತು.
























