ಆಯಿಷ್‍ಗೆ ವರುಣಾದಲ್ಲಿ 10 ಎಕರೆ ಜಾಗ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.02:-
ಮಗು ಹೊಟ್ಟೆಯಲ್ಲಿರುವಾಗಲೇ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆ. ಇದಕ್ಕಾಗಿ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆ ಅಭಿನಂದನೀಯವಾಗಿದೆ ಎಂದು ಸಿ.ಎಂ ಸಿದ್ದರಾಮಯ್ಯ ನುಡಿದರು.


ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ (ಆಯಿಷ್) ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮತ್ತು ಪ್ರಗತಿ ಕಾಣಬೇಕಾಗಿದೆ. ಇದಕ್ಕಾಗಿ ನಮ್ಮ ಸರ್ಕಾರ ಈಗಾಗಲೇ 10 ಎಕರೆ ಜಾಗ ಒದಗಿಸಿದೆ. ಇಷ್ಟಲ್ಲದೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸಲು ನಾವು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.


ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಏಷ್ಯಾದ ಅತ್ಯುತ್ತಮ ಸಂಸ್ಥೆಗಳಲ್ಲೊಂದಾಗಿರುವುದು ನಮ್ಮ ಜಿಲ್ಲೆಯ ಮತ್ತು ರಾಜ್ಯದ ಹೆಮ್ಮೆ. ಧ್ವನಿಯಿಲ್ಲದವರಿಗೆ ಧ್ವನಿಯಾಗಿರುವ, ಕಿವಿ ಕೇಳದೆ ಮೌನವಾಗಿರುವವರಿಗೆ ಮಾತಿನ ಚೈತನ್ಯ ತುಂಬಿರುವ ಇಂಥ ಸಂಸ್ಥೆ ಮೈಸೂರಿನಲ್ಲಿರುವುದು ಹಾಗೂ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.


ಮನುಷ್ಯರಿಗೆ ದೇಹದ ಎಲ್ಲಾ ಅಂಗಗಳು ಮುಖ್ಯವಾದರೂ ಕಣ್ಣು, ಕಿವಿ ಅತಿ ಮುಖ್ಯವಾದ ಅಂಗಗಳಾಗಿವೆ. ದೃಷ್ಟಿ ಮತ್ತು ಶಬ್ಧಗಳ ಗ್ರಹಿಕೆ ಮನುಷ್ಯರ ಮಾತುಗಳನ್ನು ರೂಪಿಸುತ್ತವೆ ಹಾಗೂ ನಿಯಂತ್ರಿಸುತ್ತವೆ. 2011ರ ರಾಷ್ಟ್ರೀಯ ಜನಗಣತಿಯ ಪ್ರಕಾರ ರಾಜ್ಯದಲ್ಲಿ 3.3 ಲಕ್ಷ ಜನರು ಮಾತು ಬಾರದವರು ಹಾಗೂ ಕಿವಿ ಕೇಳಿಸದವರಿದ್ದಾರೆ. ಶೇ.0.5 ರಷ್ಟಿರುವ ಈ ಅಸಹಾಯಕರು ನಮಗೆ ಅಂಕಿ ಸಂಖ್ಯೆಗಳಲ್ಲ, ಜೀವಂತ ಮನುಷ್ಯರ ನಿರಂತರ ಕಷ್ಟದ ಉದಾಹರಣೆಗಳು. ಹಾಗಾಗಿ ಈ ಸಮಸ್ಯೆಯಿರುವವರನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ನಾಗರಿಕ ಸಮಾಜದ ಹಾಗೂ ಸರ್ಕಾರದ ಜವಾಬ್ದಾರಿ ಎಂದರು.
1966ರಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ, ಚಿಕಿತ್ಸೆ, ಪುನರ್ವಸತಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಒದಗಿಸುತ್ತಿರುವ ಮಹತ್ವದ ರಾಷ್ಟ್ರೀಯ ಸಂಸ್ಥೆಯಾಗಿದೆ ಎಂದರು.


60 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ವಾಕ್ ಮತ್ತು ಶ್ರವಣದೋಷದ ಸಮಸ್ಯೆಗಳು ಶಾಶ್ವತವಾಗಿ ಬಾರದಂತೆ ತಡೆಯಲು ಅಗತ್ಯವಿರುವ ಎಲ್ಲ ಸಂಶೋಧನೆಗಳನ್ನು ಕೈಗೊಂಡು ಜಗತ್ತಿಗೆ ಬೆಳಕು ನೀಡಲಿ ಎಂದು ಆಶಿಸಿದರು.


ಕಾಕ್ಲಿಯರ್ ಇಂಪ್ಲಾಂಟ್‍ಗೆ 32 ಕೋಟಿ: ಶ್ರವಣ ಸಂಜೀವಿನಿ ಯೋಜನೆಗೆ ರಾಜ್ಯ ಸರ್ಕಾರ 2024-25ರ ಬಜೆಟ್‍ನಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ದುಬಾರಿ ಕಾಕ್ಲಿಯರ್ ಇಂಪಾಂಟ್ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸಲು 32 ಕೋಟಿ ರೂ ಮೀಸಲಿಟ್ಟಿದೆ. ಈ ಸಂಸ್ಥೆಯ ಕ್ಲಿನಿಕಲ್ ಮತ್ತು ಪುನರ್ವಸತಿ ಕಾರ್ಯವನ್ನು ಇನ್ನಷ್ಟು ವಿಸ್ತರಿಸಲು ಪೂರಕವಾಗಿ ವರುಣಾದಲ್ಲಿ ನಮ್ಮ ಸರ್ಕಾರ 10 ಎಕರೆ ಜಮೀನನ್ನು ನೀಡಿದೆ. ಈ ಸಂಸ್ಥೆಯ ಅಂಗಳದಲ್ಲಿ 2.55 ಕೋಟಿ ವೆಚ್ಚದಲ್ಲಿ ಅಂಗವಿಕಲ ಮಕ್ಕಳಿಗೆ ಆಂಫಿಥಿಯೇಟರ್ ನಿರ್ಮಾಣ, ಅಂಗವಿಕಲ ಸ್ನೇಹಿ ಸಲಕರಣೆ, ಉದ್ಯಾನವನ ಅಭಿವೃದ್ಧಿ, ಮಾತು ಬಾರದ, ಕಿವಿ ಕೇಳದ ಮಕ್ಕಳಿಗೆ ನಿರೀಕ್ಷಣಾ ಕೊಠಡಿ ಮತ್ತು ಮ್ಯೂಸಿಯಂ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.