ಕಾಬೂಲ್,ಸೆ.2:- ವಿನಾಶಕಾರಿ ಭೂಕಂಪನದಿಂದ ನಲುಗಿರುವ ಪೂರ್ವ ಆಫ್ಘಾನಿಸ್ತಾನದಲ್ಲಿ ಪರಿಹಾರ ಕಾರ್ಯ ಮತ್ತಷ್ಟು ಚುರುಕುಗೊಳಿಸಲಾಗಿದೆ. ಮನೆ-ಮಠ ಕಳೆದುಕೊಂಡ ನಿರ್ಗತಿಕರಾಗಿರುವವರ ಗೋಳು ಹೇಳತೀರದಾಗಿದೆ. ಅನ್ನ ಆಹಾರವಿಲ್ಲದೆ ರಾತ್ರಿ ಕಳೆದಿದ್ದಾರೆ.
ಈ ನಡುವೆ ಮೃತರ ಸಂಖ್ಯೆ 800ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿರುವವರನ್ನು ಪಾರು ಮಾಡಲು ಪರಿಹಾರ ತಂಡ ಶ್ರಮಿಸುತ್ತಿದೆ. ಹೆಲಿಕಾಪ್ಟರ್ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.
ಭೂಕಂಪನದಿಂದ ಹೆಚ್ಚಿನ ಸಾವುಗಳು ಕುನಾರ್ ಪ್ರಾಂತ್ಯದಲ್ಲಿ ಸಂಭವಿಸಿವೆ, ಜೊತೆಗೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಸಂಪೂರ್ಣ ಗ್ರಾಮಗಳು ಸಂಪೂರ್ಣ ನಾಶವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನಪೀಡಿತ ಪ್ರದೇಶದ ಕೆಲವು ಗ್ರಾಮಗಳಲ್ಲಿ ಆರೋಗ್ಯ ಸೌಲಭ್ಯಗಳು ಸಿಗದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾದೆ. ಜೊತೆಗೆ ಭೂಕಂಪನ ಪೀಡಿತ ಪ್ರದೇಶಕ್ಕೆ ಜಗತ್ತಿನ ಹಲವು ರಾಷ್ಟ್ರಗಳು ಈಗಾಗಲೇ ಸಹಾಯ ನೀಡುವ ಭರವಸೆ ನೀಡಿವೆ.
ಆಫ್ಘಾನಿಸ್ತಾನ ಈಗಾಗಲೇ ತೀವ್ರ ಬರ, ನೆರವು ಕಡಿತ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಂದ ತತ್ತರಿಸಿ ಹೋಗಿದೆ. ಈ ನಡುವೆ ಭೂಕಂಪನ ಪೀಡಿತ ಪ್ರದೇಶದಲ್ಲಿ ಜನರನ್ನು ಮತ್ತಷ್ಟು ಸಮಸ್ಯೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ನುರ್ಗಲ್ ಗ್ರಾಮ ಶೇಕಡಾ 95 ರಷ್ಟು ನಾಶವಾಗಿದೆ. ಕುನಾರ್ ಪ್ರದೇಶ ಕೂಡ ಹಾನಿಯಾಗಿದೆ, ಈ ಭಾಗದ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಅನೇಕ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಭೂಕಂಪನದಿಂದ ರಸ್ತೆಗಳು ಮುಚ್ಚಿಹೋಗಿರುವುದರಿಂದ ಸಂಪರ್ಕ ಕಡಿತವಾಗಿದೆ. ಸಂಕಷ್ಠಕ್ಕೆ ಸಿಲುಕಿದ ಮಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡುವ ಕೆಲಸ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪ ಪೀಡಿತ ಪ್ರದೇಶಗಳಲ್ಲಿ ಹಲವು ಹಳ್ಳಿಗಳು ನೆಲಸಮವಾಗಿವೆ, ಪರ್ವತ ಪ್ರದೇಶದ ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತವಾಗಿದೆ, ಅವಶೇಷಗಳ ಅಡಿಯಲ್ಲಿ ಸತ್ತವರನ್ನು ಮತ್ತು ಸಿಲುಕಿಕೊಂಡವರನ್ನು ಹುಡುಕುವ ಕಾರ್ಯ ಭರದಿಂದ ಸಾಗಿದೆ ಎಂದು ಕುನಾರ್ ಪ್ರಾಂತ್ಯದ ತಾಲಿಬಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸುತ್ತಿರುವವರಲ್ಲಿ ಒಬ್ಬರಾದ ಸೈಯದ್ ರಹೀಮ್ ಪ್ರತಿಕ್ರಿಯಿಸಿ ಭೂಕಂಪ ಪೀಡಿತ ಪ್ರದೇಶದಲ್ಲಿ ಹಲವರನ್ನು ರಕ್ಷಿಸಲಾಗಿದೆ, ಇನ್ನೂ ಹಲವರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದು ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದ್ದಾರೆ.

























