ಆಕಾಶವಾಣಿಯ ದೈತ್ಯ ಪ್ರತಿಭೆ ಲೇಖಕ, ಸಂಘಟಕ ಎನ್.ವಿ. ರಮೇಶ್

ಸಂಜೆವಾಣಿ ವಾರ್ತೆ
ಮೈಸೂರು, ಡಿ.04-
ಆಕಾಶವಾಣಿಯ ದೈತ್ಯ ಪ್ರತಿಭೆ ಎನ್.ವಿ. ರಮೇಶ್ ಅವರು ಲೇಖಕ ಹಾಗೂ ಅತ್ಯುತ್ತಮ ಸಂಘಟಕ ಎಂದು ಲೇಖಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ರವರು ಬಣ್ಣಿಸಿದರು.
ಅವರು ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ನಡೆದ ಆಕಾಶವಾಣಿಯ ನಿವೃತ್ತ ಅಧಿಕಾರಿ ಲೇಖಕ, ಸಂಘಟಕ ಎನ್.ವಿ. ರಮೇಶ್‍ರವರ ಕನ್ನಡ ಸಾಹಿತ್ಯ- ಸಂಗೀತ- ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಬಾನುಲಿ ಮತ್ತು ರಂಗಭೂಮಿ ಕುರಿತಾಗಿ ರಮೇಶ್ ರವರು ಬರೆದಿರುವ ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.


ಮುಂದುವರೆದು ಮಾತನಾಡಿ, ಎನ್.ವಿ. ರಮೇಶ್ ಅವರು ಆಕಾಶವಾಣಿಯ ದೈತ್ಯ ಪ್ರತಿಭೆಯಾಗಿದ್ದು ಲೇಖಕರಾಗಿ, ವಿಮರ್ಶಕರಾಗಿ ಹೆಸರುವಾಸಿಯಾಗಿದ್ದಾರೆ. ನೂರಕ್ಕೂ ಹೆಚ್ಚು ಪುಸ್ತಕಗಳನ್ನ ಬರೆದು, ತಮ್ಮದೇ ಆದ ಶೈಲಿಯಲ್ಲಿ ಓದುಗರ ಮನಸೂರೆಗೊಂಡಿದ್ದಾರೆ ಎಂದು ಪ್ರಶಂಶಿಸಿದರು.
ಬಾಲ್ಯದಿಂದಲೂ ಅಂದರೆ 7ನೇ ವರ್ಷದಿಂದಲೇ ತಮ್ಮ ತಂದೆ ಆಕಾಶವಾಣಿಯ ಹಿರಿಯ ಅಧಿಕಾರಿ ವಾಮನ ರವರ ಜೊತೆಯಲ್ಲಿಯೇ ಆಸಕ್ತಿ ವಹಿಸಿದ್ದ ರಮೇಶ್ ರವರು ಮುಂದೆ ಅವರು ಕೂಡ ಆಕಾಶವಾಣಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟು, ಮಾತಿನ ರೂಪಕ್ಕೆ ಲೇಖನದ ಸ್ಪರ್ಶ ನೀಡಿ ಸಾಧನೆ ಮಾಡಿದ್ದಾರೆ. ಅವರು ನಿವೃತ್ತಿಯ ನಂತರವೂ ಕೂಡ ದೈತ್ಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.
ಇವರು ಅನೇಕ ಸಂಘಟನೆಗಳ ಮೂಲಕ ಕನ್ನಡ ನಾಡು-ನುಡಿಗೆ ಸಂಬಂಧಪಟ್ಟಂತೆ ನೂರಾರು ಕಾರ್ಯಕ್ರಮಗಳು, ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ, ಹೊಸ ಲೇಖಕರನ್ನು ಗುರುತಿಸುವಿಕೆ, ಅತ್ಯುತ್ತಮ ಪುಸ್ತಕಗಳಿಗೆ ಬಹುಮಾನ ಹೀಗೆ ತಮ್ಮ ಶಕ್ತಿ ಮೀರಿ ದುಡಿದಿದ್ದಾರೆ.


ಮುಂದುವರೆದು ಅವರು ಹೇಳುತ್ತಾ ಅವರ “ಬಾನುಲಿ ಮತ್ತು ನಾಟಕ” ಕುರಿತಾದ ಪುಸ್ತಕವೂ ಕೂಡ ಅನೇಕ ಸಾಹಿತಿಗಳ, ಲೇಖನಗಳ ಗುಚ್ಚಗಳೊಂದಿಗೆ ಕನ್ನಡ ಸಾರಸ್ವತ ಲೋಕದಲ್ಲಿ ಒಂದು ಸ್ಥಾನ ಪಡೆದುಕೊಳ್ಳುತ್ತದೆ.
ಅವರು ಅನೇಕ ರಂಗ ದಿಗ್ಗಜರ, ಮೇರು ಸಾಹಿತಿಗಳ, ಚಿತ್ರರಂಗಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಭಾಗದವರನ್ನು ಸಂದರ್ಶನ ಮಾಡಿದ್ದಾರೆ. ಅದನ್ನ ಲೇಖನ ರೂಪದಲ್ಲೂ ಕೂಡ ಪ್ರಕಟಿಸಿರುವುದು ಮುಂದಿನ ತಲೆಮಾರಿಗೆ ಮಾರ್ಗದರ್ಶನದ ಜೊತೆಗೆ ದಾರಿದೀಪವಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.


ರಮೇಶ್ ರವರ 75ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಎರಡು ದಿನ ನಡೆದ ಈ ಕಾರ್ಯಕ್ರಮ ವಿಶೇಷವಾಗಿತ್ತು. ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ನಿವೃತ್ತ ತಹಸೀಲ್ದಾರ್ ಹಾಗೂ ಅಂಕಣಕಾರರಾದ ಡಾ. ವಿ. ರಂಗನಾಥ್, ಮತ್ತೋರ್ವ ಸಂಘಟಕ ಲೇಖಕ ಭೇರ್ಯ ರಾಮಕುಮಾರ್ ಪುಸ್ತಕ ವಿಮರ್ಶೆ ಮಾಡಿದರು.