ಅಸ್ತಮಾ ನಿರ್ವಹಣೆಯ ಕುರಿತು ಸಂವಾದ ಕಾರ್ಯಾಗಾರ

ಸಂಜೆವಾಣಿ ನ್ಯೂಸ್
ಮೈಸೂರು:ಮೇ.27:-
ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವತಿಯಿಂದ ಅಸ್ತಮಾವನ್ನು ಹೆಚ್ಚು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳುವ ಮತ್ತು ನಿರ್ವಹಿಸುವ ಕುರಿತು ಸಾರ್ವಜನಿಕ ಸಂವಾದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ರೋಗಿಗಳು ಮತ್ತು ಆರೈಕೆ ಪರಿಣಿತ ವೈದ್ಯಕೀಯ ತಜ್ಞರು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.


ಮೈಸೂರಿನ ಮಣಿಪಾಲ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರ ವಿಭಾಗದ ತಜ್ಞ ಸಲಹೆಗಾರರಾದ ಡಾ.ಲಕ್ಷ್ಮಿ ನರಸಿಂಹನ್ ಅವರು ಈ ಸಕಾಲಿಕ ಹಾಗೂ ಚಿಂತನಶೀಲ ಕಾರ್ಯಕ್ರಮದಲ್ಲಿ ಮಾತನಾಡಿ, ತಿಳಿವಳಿಕೆ ಮೂಡಿಸಿದರು. ಕಾರ್ಯಾಗಾರವು ವೈದ್ಯಕೀಯ ಒಳನೋಟ, ಪ್ರಾಯೋಗಿಕ ಸಲಹೆ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಒಳಗೊಂಡಿತ್ತು. ಅಸ್ತಮಾ ಹಾಗೂ ಔಷಧಿ ಸೇವನೆಯ ಬಗ್ಗೆ ಸಾಮಾನ್ಯವಾಗಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ, ಜಡ ಜೀವನಶೈಲಿ ಮತ್ತು ಅಲರ್ಜಿಕಾರಕ ಅಂಶಗಳಿಗೆ ಒಡ್ಡಿಕೊಳ್ಳುತ್ತಿರುವುದರಿಂದ ಅಸ್ತಮಾ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ ಎಂದು ಡಾ.ಲಕ್ಷ್ಮಿ ನರಸಿಂಹನ್ ಅಭಿಪ್ರಾಯಪಟ್ಟರು.


ತಜ್ಞರು ಏನಂತಾರೆ?:
ಅಸ್ತಮಾ ರೋಗವು ಉಲ್ಬಣವಾಗದಂತೆ ಹಾಗೂ ದೀರ್ಘಕಾಲೀನ ಸಮಸ್ಯೆಗಳನ್ನು ತಪ್ಪಿಸಲು ಶೀಘ್ರ ರೋಗನಿರ್ಣಯ ಮತ್ತು ಸಕಾಲಿಕ ವೈದ್ಯಕೀಯ ನೆರವನ್ನು ಪಡೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಅಸ್ತಮಾ ಒಂದು ದೀರ್ಘಕಾಲದ ಉಸಿರಾಟದ ಸಮಸ್ಯೆ. ಸಮಯೋಚಿತ ರೋಗನಿರ್ಣಯ, ವೈಯಕ್ತಿಕ ಚಿಕಿತ್ಸಾ ಯೋಜನೆಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದರಿಂದ, ರೋಗಿಗಳು ಆರೋಗ್ಯಪೂರ್ಣ ಜೀವನವನ್ನು ನಡೆಸಬಹುದು’ ಎಂದು ಡಾ.ನರಸಿಂಹನ್ ತಿಳಿಸಿದರು.


ರೋಗಿಯ ವಯಸ್ಸು, ರೋಗದ ತೀವ್ರತೆ ಮತ್ತು ಹಿಂದಿನ ಔಷಧಿಗಳಿಗೆ ಪ್ರತಿಕ್ರಿಯೆಯ ಆಧಾರದ ಮೇಲೆ ವ್ಯಕ್ತಿಯಾಧಾರಿತ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ಅರಿಯಬೇಕು. ಓರ್ವ ರೋಗಿಗೆ ಸರಿಹೊಂದುವ ಚಿಕಿತ್ಸಾ ವಿಧಾನ ಇನ್ನೋರ್ವ ರೋಗಿಗೆ ಸರಿ ಹೊಂದಬೇಕೆಂದಿಲ್ಲ. ಅದಕ್ಕಾಗಿಯೇ ತಜ್ಞರ ಮಾರ್ಗದರ್ಶನದಲ್ಲಿ ರೂಪಿಸಿದ ಚಿಕಿತ್ಸಾ ಯೋಜನೆಗಳನ್ನು ಪಡೆದುಕೊಳ್ಳುವುದು ಮುಖ್ಯವಾಗಿದೆ ಎಂದು ಅವರು ಸಲಹೆ ನೀಡಿದರು.