ಪುತ್ತೂರು: ಪುತ್ತೂರಿನ ಕೊಂಬೆಟ್ಟು ಕ್ರೀಢಾಂಗಣದಲ್ಲಿ ಅ.೨೦ರಂದು ನಡೆಯಲಿರುವ ದೀಪಾವಳಿ ಕೊಡುಗೆ ವಿತರಣಾ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದು, ಇದಕ್ಕೆ ಸಂಬಂಧಿಸಿ ಸರ್ಕಾರಿ ನಿಯಮಗಳನ್ನು ಅನುಕರಿಸಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಸುಮಾರು ೧ ಲಕ್ಷ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭ ಯಾವುದೇ ತೊಂದರೆಗಳಾಗದಂತೆ ಸೂಕ್ತಕ್ರಮಗಳನ್ನು ಅಳವಡಿಕೆ ಮಾಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಕೊಂಬೆಟ್ಟು ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಅವರು ಬೆಳಗ್ಗೆ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ೧೦.೪೫ ಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ೧೧.೪೫ ಕ್ಕೆ ಪುತ್ತೂರಿಗೆ ತಲುಪಲಿದ್ದಾರೆ. ಸುಮಾರು ೨ ಗಂಟೆಯ ತನಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ವಸ್ತ್ರ ವಿತರಣೆಯ ಏಕೈಕ ಕಾರ್ಯಕ್ರಮ ಮಾತ್ರ ಅಂದು ಮುಖ್ಯಮಂತ್ರಿಗಳಿಗೆ ನಿಗದಿಯಾಗಿದೆ ಎಂದರು.
ಇದು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮ. ಕಳೆದ ೧೨ ವರ್ಷಗಳಿಂದ ದೀಪಾವಳಿಯ ಸಂದರ್ಭದಲ್ಲಿ ವಸ್ತ್ರ ವಿತರಣೆ ಮಾಡಿಕೊಂಡು ಬರಲಾಗಿದೆ. ಒಂದು ಮನೆಯಿಂದ ಎಷ್ಟು ಮಂದಿ ಬಂದರೂ ಅನ್ನದಾನ, ವಸ್ತ್ರದಾನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಕಾಲ್ತುಳಿತದ ಪ್ರಕರಣಗಳು ನಡೆದ ಬಳಿಕ ಹೆಚ್ಚು ಜನ ಸೇರುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೆಲವು ನಿಯಮಗಳನ್ನು ಮಾಡಲಾಗಿದೆ. ಆದರಂತೆ ಐಜಿಪಿ ಅಮಿತ್ ಸಿಂಗ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ವ್ಯವಸ್ಥೆಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ೨೦ ಮಂದಿ ಮಾತ್ರ ವೇದಿಕೆಯಲ್ಲಿ ಇರುತ್ತಾರೆ. ವೇದಿಕೆ ನಿರ್ವಹಣೆಯನ್ನೂ ಪೊಲೀಸ್ ಇಲಾಖೆ ಮಾಡುತ್ತದೆ.೨೦ ಸಾವಿರ ಚಯರ್, ಪ್ರವೇಶ ಬಂದ್ ಇರದ ವ್ಯವಸ್ಥೆ ಮೊದಲಾದವುಗಳನ್ನು ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ಬರುವವರಿಗೆ ಮಹಾಲಿಂಗೇಶ್ವರ ದೇವಾಲಯದ ಎದುರಿನ ಗದ್ದೆಯಲ್ಲಿ, ಕೊಂಬೆಟ್ಟು ಕಾಲೇಜು ಬಳಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಹಿರಿಯರು, ಮಕ್ಕಳೊಂದಿಗೆ ಬರುವವರಿಗೆ ಅಲ್ಲಿಂದ ಉಚಿತ ರಿಕ್ಷಾ ವ್ಯವಸ್ಥೆ ಇದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಭಾಗಗಳಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ವ್ಯವಸ್ಥೆ ಇರುತ್ತದೆ. ಹೆಚ್ಚುವರಿ ೨೦ ರೂಟ್ ಗಳಲ್ಲಿ ಬಸ್ ಓಡಾಟ ನಡೆಸಲಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ೬ ಗಂಟೆಯ ತನಕ ನಡೆಯಲಿದೆ. ೩ ಗಂಟೆಯ ಬಳಿಕ ಲೈವ್ ದೋಸೆಯನ್ನು ಬಂದವರಿಗೆ ನೀಡಲಾಗುತ್ತದೆ. ಮುಖ್ಯಮಂತ್ರಿಗಳು ರಸ್ತೆ ಮಾರ್ಗವಾಗಿ ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಇಲಾಖೆಗೆ ಸೂಚನೆ ನೀಡಲಾಗಿದೆ. ಸಮಾವೇಶದ ಸಂದರ್ಭದಲ್ಲಿ ಪುತ್ತೂರು ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಕಾಮಗಾರಿಗಳಿಗೆ ಶೀಘ್ರ ಶಿಲಾನ್ಯಾಸ ನೆರವೇರಿಸಬೇಕೆಂಬ ಬೇಡಿಕೆ ಇಡಲಾಗುವುದು. ಮುಂದೆ ಶೀಘ್ರದಲ್ಲಿ ಮುಖ್ಯಮಂತ್ರಿಗಳು ಮತ್ತೊಮ್ಮೆ ಪುತ್ತೂರಿಗೆ ಆಗಮಿಸಲಿದ್ದು, ಕೋರ್ಟ್ ಸಮುಚ್ಛಯ ಉದ್ಘಾಟನೆ, ಕ್ರೀಡಾಂಗಣ, ಆರ್.ಟಿ.ಒ. ಟ್ರ್ಯಾಕ್‌ಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಟ್ರಸ್ಟ್ ನಿರ್ದೇಶಕಿ ಸುಮಾ ಎ. ರೈ, ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ಮಹಮ್ಮದ್ ಬಡಗನ್ನೂರು, ಜಯಪ್ರಕಾಶ್ ಬದಿನಾರ್, ಕೃಷ್ಣಪ್ರಸಾದ್ ಬೊಳ್ಳಾವು, ಯೋಗೀಶ್ ಸಾಮಾನಿ ಉಪಸ್ಥಿತರಿದ್ದರು.

























