ಅವೈಜ್ಞಾನಿಕ ಅಂಡರ್ ಪಾಸ್ ಮತ್ತು ಸರ್ವೀಸ್ ರಸ್ತೆ: ಸವಾರರ ಪರದಾಟ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.13 :
ತಾಲೂಕಿನ ಉದ್ದಗಲಕ್ಕೂ ಹಾದುಹೋಗಿರುವ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಕೆಶಿಪ್ ನವರು ನಿರ್ಮಿಸಿರುವ ಅಂಡರ್ ಪಾಸ್ ಗಳು ಮತ್ತು ಸರ್ವೀಸ್ ರಸ್ತೆಗಳು ಸಂಪೂರ್ಣ ಅವೈಜ್ಞಾನಿಕವಾಗಿದ್ದು ರೈತಾಪಿ ವರ್ಗಕ್ಕೆ ಮತ್ತು ವಾಹನ ಸವಾರರಿಗೆ ಭಾರೀ ಸಮಸ್ಯೆ ಎದುರಾಗಿದೆ. ಮಳೆಗಾಲದಲ್ಲಿ ಅಂಡರ್ ಪಾಸ್ ಗಳಲ್ಲಿ ನೀರು ನಿಲ್ಲುತ್ತಿದ್ದು ಜನಸಾಮಾನ್ಯರು ಸಂಚರಿಸಲಾಗದ ಸ್ಥಿತಿಯಿದೆ.

ಪಟ್ಟಣದ ಹೊರವಲಯದ ಚೌಡೇಶ್ವರಿ ದೇವಾಲಯದ ಬಳಿ ಜಲಸೂರು ಹೆದ್ದಾರಿಯಲ್ಲೊಂದು ಅಂಡರ್ ಪಾಸ್ ಇದೆ. ಇದು ಹೇಮಾವತಿ ವಿತರಣಾ ನಾಲಾ ಏರಿಯ ಮೂಲಕ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದವರೆಗೂ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತಾಪಿ ವರ್ಗ ಮತ್ತು ಪಾಲಿಟೆಕ್ನಿಕ್ ಹಿಂಭಾಗದ ಮೂಲಕ ಪಟ್ಟಣವನ್ನು ಸಂಪರ್ಕಿಸುವ ಜನರಿಗೆ ಇರುವ ಏಕೈಕ ಅಂಡರ್ ಪಾಸ್.

ಇದು ಚೌಡೇಶ್ವರಿ ದೇವಾಲಯದ ಮೂಲಕ ಈ ರಸ್ತೆಯಲ್ಲಿ ಸಂಚರಿಸುವವರಿಗಾಗಿ ಕೆಶಿಪ್ ಎಂಜಿನಿಯರುಗಳು ಅಂಡರ್ ಪಾಸ್ ನ ಎರಡೂ ಬದಿಯಲ್ಲೂ ಸರ್ವೀಸ್ ರಸ್ತೆ ನಿರ್ಮಿಸಿದ್ದಾರೆ. ಆದರೆ ಸರ್ವೀಸ್ ರಸ್ತೆ ಅವೈಜ್ಞಾನಿಕವಾಗಿದ್ದು ಜನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಜೊತೆಗೆ ಅಂಡರ್ ಪಾಸ್ ನಲ್ಲಿ ಮಳೆ ಬಂದರೆ ನೀರು ತುಂಬಿಕೊಳ್ಳುತ್ತಿದೆ. ಅಂಡರ್ ಪಾಸ್ ಮೂಲಕ ನೀರು ಸುಲಲಿತವಾಗಿ ಹರಿದು ಹೋಗುವ ವ್ಯವಸ್ಥೆಯಿಲ್ಲ. ಇದರ ಪರಿಣಾಮ ಸದರಿ ಅಂಡರ್ ಪಾಸ್ ಜನರ ಬಳಕೆಗೆ ನಿಷ್ಪ್ರಯೋಜಕವಾಗಿದೆ.

ಇದೇ ರೀತಿ ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ಬಳಿಯೂ ಒಂದು ಅಂಡರ್ ಪಾಸ್ ಇದೆ. ಇದೂ ಕೂಡ ಮಳೆ ಬಂದರೆ ನೀರು ತುಂಬಿಕೊಂಡು ಜನ ನೀರಿನೊಳಗೆ ಸಂಚರಿಸಬೇಕಾದ ಸ್ಥಿತಿಯಿದೆ. ಚಿಕ್ಕೋನಹಳ್ಳಿ ಅಂಡರ್ ಪಾಸ್ ನಲ್ಲಿ ಬರುವ ಕೆಶಿಪ್ ರಸ್ತೆಯಲ್ಲಿ ಕಾಲುವೆ ನೀರು ಮತ್ತು ಮಳೆಯ ನೀರಿನೊಂದಿಗೆ ಶಾಲಾ ಮಕ್ಕಳು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ತಿರುಗಾಡಲು ಸಾದ್ಯವಾಗುತ್ತಿಲ್ಲ. ಹೆದ್ದಾರಿಯ ಅಂಡರ್ ಪಾಸ್ ಮತ್ತು ಸರ್ವೀಸ್ ರಸ್ತೆಗಳು ಜನರ ಬಳಕೆಗೆ ಯೋಗ್ಯವಾಗಿಲ್ಲದ ಕಾರಣ ರೈತಾಪಿ ವರ್ಗ ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ತಮ್ಮ ಜಮೀನುಗಳಿಗೆ ಹೋಗಲು ಪ್ರಯಾಸ ಪಡಬೇಕಾಗಿದೆ. ಕೆಶಿಪ್ ಅಧಿಕಾರಿಗಳು ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ಹಳ್ಳಿಯ ಜನರ ಸಂಚಾರಕ್ಕೂ ಕೆಲವು ಕಡೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿಲ್ಲ. ಗ್ರಾಮದೊಳಗೆ ಹೆದ್ದಾರಿ ಹಾದುಹೋಗಿರುವುದರಿಂದ ತಾಲೂಕು ವ್ಯಾಪ್ತಿಯಲ್ಲಿ ಒಂದಲ್ಲ ಒಂದು ಕಡೆ ಅಮಾಯಕರು ಅಪರಿಚಿತ ವಾಹನಗಳಿಗೆ ಬಲಿಯಾಗುತ್ತಿದ್ದು ಕುಟುಂಬಗಳು ಅನಾಥವಾಗುತ್ತಿವೆ.ಮೂರ್ನಾಲ್ಕು ದಿನಗಳ ಹಿಂದೆ ತಾಲೂಕಿನ ಅಕ್ಕಿಹೆಬ್ಬಾಳು ಬಳಿಯ ದಡದಹಳ್ಳಿ ಗ್ರಾಮದಲ್ಲಿ ಚನ್ನೇಗೌಡ ಎನ್ನುವ 62 ವರ್ಷ ವಯಸ್ಸಿನ ವೃದ್ದ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ. ಇದೇ ರೀತಿ ಹೆದ್ದಾರಿ ಬದಿಯ ಕೈಗೋನಹಳ್ಳಿ, ಬೊಮ್ಮೇನಹಳ್ಳಿ, ಹರಿಹರಪುರ, ಹೇಮಾವತಿ ನದಿ ಸೇತುವೆ ಮುಂತಾದ ಕಡೆ ಹಲವಾರು ಜನ ಅಪರಿಚಿತ ವಾಹನಗಳಿಗೆ ಬಲಿಯಾಗಿದ್ದು ಜಲಸೂರು ರಾಜ್ಯ ಹೆದ್ದಾರಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಯಮಲೋಕದ ಹೆದ್ದಾರಿಯಾಗಿದೆ.

ಅವೈಜ್ಞಾನಿಕ ಹೆದ್ದಾರಿಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕ್ಷೇತ್ರದ ಜನರ ದೂರುಗಳನ್ನು ಆಲಿಸಿ ಕಳೆದ ಎರಡು ತಿಂಗಳ ಹಿಂದೆ ಶಾಸಕ ಹೆಚ್.ಟಿ.ಮಂಜು ಕೆಶಿಪ್ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಹೆದ್ದಾರಿಯಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದರು. ಈ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ ಕೇಶಿಪ್ ಎಂಜಿನಿಯರುಗಳು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರಾದರೂ ಇದುವರೆಗೆ ಒಂದೇ ಒಂದು ಸಮಸ್ಯೆ ಬಗೆಹರಿದಿಲ್ಲ. ಹೆದ್ದಾರಿ ಹಾದು ಹೋಗಿರುವ ಉದ್ದಕ್ಕೂ ಗ್ರಾಮೀಣ ಜನ ಜೀವ ಭಯದಲ್ಲಿಯೇ ಸಂಚರಿಸುತ್ತಿದ್ದಾರೆ. ರಾಜ್ಯ ಹೆದ್ದಾರಿ ಪ್ರಧಿಕಾರದ ಅಧಿಕಾರಿಗಳು ಈಗಲಾದರೂ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಾಗಿದೆ. ತಾಲೂಕಿನ ಉದ್ದಗಲಕ್ಕೂ ಇರುವ ಅಂಡರ್ ಪಾಸ್ ಗಳಲ್ಲಿ ನೀರು ನಿಲ್ಲದಂತೆ ಅವುಗಳನ್ನು ವೈಜ್ಞಾನಿಕವಾಗಿ ಸರಿಪಡಿಸಬೇಕಾಗಿದೆ. ಸರ್ವೀಸ್ ರಸ್ತೆಗಳನ್ನು ಸುಧಾರಿಸಿ ರೈತರ ಎತ್ತಿನ ಗಾಡಿಗಳು ಮತ್ತು ಟ್ರ್ಯಾಕ್ಟರ್, ಕಬ್ಬಿನ ಲಾರಿಗಳ ಸಂಚಾರಕ್ಕೆ ಯೋಗ್ಯವಾಗಿಸಬೇಕಾಗಿದೆ. ಗ್ರಾಮಗಳ ಒಳಗೆ ರಾಜ್ಯ ಹೆದ್ದಾರಿ ಹಾದುಹೋಗಿರುವ ಕಡೆ ಅಪಘಾತಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ವಹಿಸಬೇಕಾಗಿದೆ.