
ಸಂಜೆವಾಣಿ ನ್ಯೂಸ್
ಮೈಸೂರು: ಡಿ.04:- ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50,000 ರೂ. ಸಹಾಯಧನ ನೀಡಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ವಿವಾಹದ ಪೆÇ್ರೀತ್ಸಾಹಧನ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಗೆ 150 ಗುರಿ ನಿಗಧಿ ಪಡಿಸಲಾಗಿದ್ದು, ಸರಳ ವಿವಾಹ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು ಎಂದರು.
ಅರ್ಜಿ ಸಲ್ಲಿಸುವ ಅಲ್ಪಸಂಖ್ಯಾತ ವಧುವಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷ ಹಾಗೂ ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ವಯಸ್ಸಾಗಿರಬೇಕು. ಯಾವುದೇ ಬಾಲ್ಯ ವಿವಾಹಕ್ಕೆ ಆಸ್ಪದ ಕೊಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಯೋಜನೆಗಾಗಿ ಫಲಾನುಭವಿಗಳನ್ನು ಗುರುತಿಸಲು ಹೆಚ್ಚಿನ ಶ್ರಮ ವಹಿಸಿ ಕೆಲಸ ನಿರ್ವಹಿಸಬೇಕು. ತಂದೆ ಅಥವಾ ತಾಯಿ ಇಲ್ಲದ ವಧುವನ್ನು ಗುರುತಿಸಿ ಸರಳ ವಿವಾಹ ಯೋಜನೆಯ ಸವಲತ್ತು ಒದಗಿಸಿದರೆ ಯೋಜನೆ ಹೆಚ್ಚಿನ ಸಾರ್ಥಕತೆ ಪಡೆಯುತ್ತದೆ ಎಂದರು.
ಅಲ್ಪಸಂಖ್ಯಾತ ಸಮುದಾಯದಡಿ ಬರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಹಾಗೂ ಪಾರ್ಸಿ ಅವರಿಗೆ ಸರಳ ವಿವಾಹ ಯೋಜನೆಯಡಿ ಗುರಿ ನಿಗದಿ ಮಾಡಿ ಅರ್ಜಿ ಆಹ್ವಾನಿಸಿ ಹೆಚ್ಚಿನ ಪ್ರಚಾರ ನೀಡಿ ಕೆಲವು ಸಮುದಾಯದಿಂದ ಅರ್ಜಿ ಬರದೇ ಇದ್ದಲ್ಲಿ ನಂತರ ಬೇರೆ ಸಮುದಾಯಕ್ಕೆ ಹೆಚ್ಚುವರಿಯಾಗಿ ನೀಡುವುದು ಉತ್ತಮ ಎಂದರು.
ಸರಳ ವಿವಾಹ ಯೋಜನೆಯಡಿ ಅರ್ಜಿ ಸ್ವೀಕೃತಿಯಾದ ನಂತರ ವಧು ಹಾಗೂ ವರ ನೀಡಿರುವ ವಯಸ್ಸಿನ ದಾಖಲಾತಿಗಳನ್ನು ಪರಿಶೀಲಿಸಿ ಹಾಗೂ ಅವರು ವಾಸವಿರುವ ಸ್ಥಳ ಭೀಟಿ ಮಾಡಿ ವರನಿಗೆ ಜೀವಂತ ಪತ್ನಿ ಹಾಗೂ ವಧುವಿಗೆ ಜೀವಂತ ಪತಿ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ನಂತರ ಯೋಜನೆಯ ಸೌಲಭ್ಯ ಒದಗಿಸಿಕೊಡಿ ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸಿಫ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿಲ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಹೆಚ್.ನಿರ್ಮಲಾ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

























