ಅರ್ಥಪೂರ್ಣವಾಗಿ ದಸರಾ ಆಚರಿಸಲು ಒತ್ತಾಯ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.09:-
ದಸರಾ ಮಹೋತ್ಸವ ಅರ್ಥಪೂರ್ಣವಾಗಿ ಆಗಬೇಕು, ಯುವ ದಸರಾ ದೊಂಬಿ ಆಗಬಾರದು, ಸರಕಾರ, ಪಕ್ಷದ ದಸರಾವಾಗದೇ, ಸರ್ವಜನಾಂಗ ದಸರಾ ಆಗಬೇಕು ಎಂದು ಒತ್ತಾಯಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ಸೋಮವಾರ ಹಾರ್ಡಿಂಜ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.


ಈ ವೇಳೆ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿಚಾರವಾಗಿ ಮಾತನಾಡಿ, ವಾಟಾಳ್ ನಾಗರಾಜ್, ದಸರಾ ಉದ್ಘಾಟನೆ ಮಾಡುತ್ತಿರುವುದು ಓರ್ವ ಮಹಿಳೆ, ಈ ಕಾರಣಕ್ಕೆ ಸುಮಾರು ಒಂದೂವರೆ ತಿಂಗಳಿಂದ ದಾಳಿ ಮಾಡುತ್ತಿದ್ದಾರೆ. ಹಿಂಸೆ ದಬ್ಬಾಳಿಕೆ ನಡೆಯುತ್ತಿದೆ. ಅವರೇ ಉದ್ಘಾಟನೆ ಮಾಡಲಿ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.


ಕನ್ನಡದ ಬಾವುಟದ ಬಗ್ಗೆ ಅವರಿಗೆ ಖಂಡಿತವಾಗಿಯೂ ಗೊತ್ತಿಲ್ಲ. ಗೊತ್ತಿದ್ದರೆ ಮಾತನಾಡುತ್ತಿರಲಿಲ್ಲ. ಕನ್ನಡ ಬಾವುಟಕ್ಕೆ ಅನ್ಯಾಯ ಆಗುತ್ತಿದೆ ಎಂದು ಬಿಜೆಪಿ, ಆರ್‍ಎಸ್‍ಎಸ್‍ನವರು ಹೇಳುತ್ತಾರೆ. ಬಿಜೆಪಿ, ಆರ್‍ಎಸ್‍ಎಸ್‍ನವರು ಯಾವತ್ತಾದರೂ ಕನ್ನಡಕ್ಕಾಗಿ ಹೋರಾಟ ಮಾಡಿದ್ದಾರಾ? ಜೈಲಿಗೆ ಹೋಗಿದ್ದಾರಾ? ಇಡೀ ರಾಜ್ಯದಲ್ಲಿ ಹಿಂದಿ ಬೇಡವೇ ಬೇಡ ಎಂದು ಮಾತನಾಡಲಿ. ಇವರೇನೂ ಕನ್ನಡವನ್ನು ಉದ್ದಾರ ಮಾಡುತ್ತಾರಾ ಎಂದು ಕಿಡಿಕಾರಿದರು.


ಓರ್ವ ಮಹಿಳೆ ದಸರಾ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಇತ್ತೀಚಿನ ವಿದ್ಯಮಾನಗಳನ್ನು ನೋಡಿದರೆ ನನಗೆ ನೋವಾಗುತ್ತದೆ. ಬಾನು ಮುಷ್ತಾಕ್ ಉದ್ಘಾಟನೆ ಮಾಡವುದಕ್ಕೆ ನಾನು ಸ್ವಾಗತಿಸುತ್ತೇನೆ ಎಂದರು.


ಮೈಸೂರು ದಸರಾಗೆ ಐತಿಹಾಸಿಕ ಶಕ್ತಿ ಇದೆ. ಇದು ಜನ ಸಾಮಾನ್ಯರ ದಸರಾ ಆಗಬೇಕು. ಸರಕಾರದ ದರ್ಬಾರ್ ಆಗಬಾರದು. ಪಕ್ಷದ ದಸರಾ ಆಗಬಾರದು. ರೈತರು, ಕನ್ನಡ ಪರ ಹೋರಾಟಗಾರರು ಎಲ್ಲಾ ಪಕ್ಷದ ಸದಸ್ಯರು ಸಮಿತಿಯಲ್ಲಿ ಇರಬೇಕು ಎಂದು ಹೇಳಿದರು.


ಚಾಮುಂಡೇಶ್ವರಿ ದರ್ಶನ ವ್ಯಾಪಾರ, ಬ್ಲಾಕ್ ಮಾರುಕಟ್ಟೆ ಆಗಬಾರದು. ಗೋಲ್ಡ್ ಟಿಕೆಟ್‍ಗೆ ಅಷ್ಟು ದುಡ್ಡು ಕೊಟ್ಟು ಎಲ್ಲಿ ನೋಡಲು ಆಗುತ್ತದೆ. ಚಾಮುಂಡಿ ಬೆಟ್ಟದ ನಂದಿ ರಸ್ತೆ ಇನ್ನೂ ದುರಸ್ತಿ ಆಗಿಲ್ಲ. ನಗರದ ರಸ್ತೆಗಳು ಹಾಳಾಗಿವೆ ಎಂದು ಕಿಡಿಕಾರಿದರು.


ಯುವ ದಸರಾ ಬಹಳ ಗಂಭೀರವಾಗಿರಬೇಕು. ಕಲಾವಿದರು ನೂರಕ್ಕೆ ನೂರರಷ್ಟು ಕನ್ನಡಿಗರು ಇರಬೇಕು. ಕಾರ್ಯಕ್ರಮದಲ್ಲಿ ಪರಿಭಾಷೆಯವರ ದರ್ಬಾರ್ ಆಗಿದೆ. ಚಾಮರಾಜನಗರವನ್ನು ದಸರಾದಿಂದ ಕೈ ಬಿಟ್ಟಿದ್ದಾರೆ. ಚಾಮರಾಜನಗರ ಮೈಸೂರು ಒಟ್ಟಿಗೆ ಇತ್ತು, ಅರಮನೆಗೂ ಚಾಮರಾಜನಗರಕ್ಕೂ ಸಂಬಂಧ ಇದೆ. ಅದ್ಬುತವಾದ ಗಡಿ ಜಿಲ್ಲೆ. ಅಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ಆಗ್ರಹಿಸಿದರು.


ಮೈಸೂರು ಹೊರವಲಯದಲ್ಲಿ ಮಾರ್ವಾಡಿಗಳು ಆಸ್ತಿ ಖರೀದಿಸುತ್ತಿದ್ದಾರೆ. ನಮ್ಮವರ ಆಸ್ತಿಗಳನ್ನು ಖರೀದಿಸಿ, ಇಲ್ಲಿ ದರ್ಬಾರ್ ಶುರು ಮಾಡುತ್ತಾರೆ. ಆದ್ದರಿಂದ ಆಸ್ತಿಗಳನ್ನು ಮಾರದೇ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.


ಪ್ರತಿಭಟನೆಯಲ್ಲಿ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಪಾರ್ಥಸಾರಥಿ ಮತ್ತಿತರರು ಪಾಲ್ಗೊಂಡಿದ್ದರು.