ಅರಸುರವರ ಕ್ರಾಂತಿಕಾರಿ ಯೋಜನೆಗಳು ಇನ್ನೂ ಜೀವಂತ: ಕೆ.ದೀಪಕ್

ಸಂಜೆವಾಣಿ ವಾರ್ತೆ
ಹುಣಸೂರು,ಸೆ.27:-
ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿದ್ದ ಉಳುವವನೆ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ ದೇಶದಲ್ಲಿಯೇ ಮಾದರಿಯಾಗಿ ಎಷ್ಟೋ ರೈತ ಕುಟುಂಬಗಳು ನಿರಾಳರಾದವು ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಪ್ರಾಯಪಟ್ಟರು.

ನಗರದ ರೋಟರಿ ಭವನದಲ್ಲಿ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ನಡೆದ ಡಿ.ದೇವರಾಜ ಅರಸು 110ರ ನೆನಪು ಒಂದು ಪ್ರೀತಿಯ ಸಂಭ್ರಮ ದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ ಮತ್ತು ತಲೆಮೇಲೆ ಮಲ ಹೊರುವ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದ ಶ್ರೇಯಸ್ಸು ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅರಸು ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಬಹುವಾಗಿ ಶ್ರಮಿಸಿದ್ದರು. ಅರಸು ಒಬ್ಬ ಕರ್ಮಯೋಗಿ, ರಾಜಕೀಯ ಮುತ್ಸದ್ದಿಯಾಗಿದ್ದರು ಎಂದು ಬಣ್ಣಿಸಿದರು.

ರಾಜ್ಯದಲ್ಲಿ 70-80ರ ದಶಕದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಪರಿವರ್ತನೆಗೆ ಗಟ್ಟಿಯಾದ ಅಡಿಗಲ್ಲು ಹಾಕಿದ್ದ ದೇವರಾಜ ಅರಸು ಅವರು ಡಾ.ಬಿ ಆರ್ ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದರು. ಇದರ ಪರಿಣಾಮ ಜನರ ಬಡತನ ದೂರವಾಗುತ್ತ ಬಂದಿದೆ ಎಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಸಾಮಾಜಿಕ ನ್ಯಾಯದ ನೇತಾರ ದಿವಂಗತ ದೇವರಾಜ ಅರಸುರವರ ಚಿಂತನೆಗಳನ್ನು ಮುಂದಿನ ತಲೆಮಾರಿಗೂ ದಾಟಿಸುವಲ್ಲಿ ಸಾಮುದಾಯಿಕ ಹೊಣೆಗಾರಿಕೆ ಮೆರೆಯಬೇಕಿದೆ ಎಂದರು.
ಕುರುಬ ಅಭಿವೃದ್ಧಿಯ ಸಂಘದ ಅಧ್ಯಕ್ಷ ಡಿ.ಕೆ. ಕುನ್ನೇಗೌಡ , ನಾಯಕ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ. ಎಸ್. ಅಣ್ಣಯ್ಯನಾಯಕ ಹಾಗೂ ರೋಟರಿ ಸಂಸ್ಥೆಯ ಅಧ್ಯಕ್ಷ ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ರಾಜು ಶಿವರಾಜೇಗೌಡ, ಗ್ಯಾರೆಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಕಾಂಗ್ರೆಸ್ ಮುಖಂಡ ರಾಜು ಕಾಂಕ್ರೀಟ್, ನಿಲುವಾ ಗಿಲು ಪ್ರಭಾಕರ್, ಮಹಾದೇವಮ್ಮ, ಬಸವರಾಜು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಸಮಾನಮನಸ್ಕ ಸಂಘಟನೆ ಮುಖಂಡ ಜೆ. ಮಹದೇವ್ ಪ್ರಾಸ್ತವಿಕ ಮಾತುಗಳನ್ನಾಡಿದರು.
ದಸಂಸ ಅಧ್ಯಕ್ಷ ಶಿವರಾಜು ಕಾರ್ಯಕ್ರಮ ನಿರ್ವಹಣೆ ಮಾಡಿದರು, ಡೇವಿಡ್ ರತ್ನಪುರಿ ಸ್ವಾಗತಿಸಿದರು.