ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.17:-
ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಖಾಸಗಿ ದರ್ಬಾರ್ ಒಂದಾಗಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸುವ ಸಿಂಹಾಸನವನ್ನು ಮಂಗಳವಾರ ಅಂಬಾವಿಲಾಸ ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ಜೋಡಣೆ ಮಾಡಿ ಪೂಜೆ ಸಲ್ಲಿಸಲಾಯಿತು.


ನವರಾತ್ರಿಗೂ ಮುನ್ನ ಭದ್ರತಾ ಕೊಠಡಿಯಲ್ಲಿರಿಸಿದ್ದ ಸಿಂಹಾಸನದ ಬಿಡಿ ಭಾಗಗಳನ್ನು ಹೊರತಂದು ಅದನ್ನು ಜೋಡಿಸಿ ಸಂಪ್ರದಾಯಬದ್ಧ ಪೂಜೆ ಬಳಿಕ ವಿಜಯದಶಮಿಯ ಎಲ್ಲ ಕಾರ್ಯಕ್ರಮಗಳನ್ನು ನೆರವೇರಿಸುವುದು ವಾಡಿಕೆ. ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯವಾಗಿದ್ದು, ದರ್ಬಾರ್ ಹಾಲ್‍ನಲ್ಲಿ ರತ್ನ ಖಚಿತ ಸಿಂಹಾಸನದ ಮೇಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಸೆ.22ರಿಂದ ಅ.2ರವರೆಗೆ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಜರುಗಲಿದ್ದು, ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವದ ಆರಂಭಕ್ಕೆ ಕೇವಲ 6 ದಿನಗಳಷ್ಟೇ ಬಾಕಿ ಇರುವುದರಿಂದ ಶಾಸ್ತ್ರೋಕ್ತವಾಗಿ ವಿಧಿ ವಿಧಾನದಂತೆ ಸಿಂಹಾಸನ ಜೋಡಿಸಿ ದರ್ಬಾರ್‍ಗೆ ಸಿದ್ದತೆ ಮಾಡಲಾಯಿತು.


ಇದುವರೆಗೆ ಅರಮನೆಯ ಸುಪರ್ಧಿನಲ್ಲಿದ್ದ ಸಿಂಹಾಸನವನ್ನು ಪ್ರಮೋದಾದೇವಿ ಅವರು ಜಿಲ್ಲಾಡಳಿತದ ವಶಕ್ಕೆ ನೀಡಿದರು. ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂನಿಂದ ಹೊರತೆಗೆದು ಅರಮನೆ ಪಂಚಾಂಗದಂತೆ ಬೆಳಗ್ಗೆ 10.45ರಿಂದ 11.15ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ಮಾಡಲಾಯಿತು. ಇದಕ್ಕಾಗಿ ಬೆಳಗ್ಗೆ 7ರಿಂದಲೇ ವಿವಿಧ ಪೂಜಾ ಕೈಂಕರ್ಯ ಜರುಗಿದವು. ಅರಮನೆ ಪುರೋಹಿತರ ನೇತೃತ್ವದಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಶ್ರೀ ಚಾಮುಂಡಿ ಪೂಜೆ ನೆರವೇರಿಸಿ, ನಂತರ ಪೂರ್ಣಾಹುತಿ ನೆರವೇರಿಸಲಾಯಿತು. ಅಂತಿಮವಾಗಿ ಶಾಂತಿ ಪೂಜೆ ಮಾಡಲಾಯಿತು. ಬಳಿಕ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಸಿಂಹಾಸನದ ಜೋಡಣೆ ಕಾರ್ಯ ನಡೆಯಿತು. ನಂತರ ಪಟ್ಟದ ಕುದುರೆ, ಪಟ್ಟದ ಹಸುವನ್ನು ಕಲ್ಯಾಣಮಂಟಪದ ಸಮೀಪ ಇರುವ ಅಂಗಳಕ್ಕೆ ಕರೆತಂದು ಪೂಜಿಸಲಾಯಿತು.


ಜೋಡಣಾ ಕಾರ್ಯ: ಅರಮನೆಯ ನೆಲಮಾಳಿಗೆಯಲ್ಲಿರುವ ಸ್ಟ್ರಾಂಗ್ ರೂಮ್ ತೆರೆದು ಸಿಂಹಾಸನ ಹಾಗೂ ಭದ್ರಾಸನದ ಬಿಡಿ ಭಾಗಗಳನ್ನು ಪ್ರತ್ಯೇಕಿಸಲಾಯಿತು. ಶಸ್ತ್ರಸಜ್ಜಿತ ಪೆÇಲೀಸರ ಕಣ್ಗಾವಲಿನಲ್ಲಿ ಒಂದೊಂದೆ ಬಿಡಿ ಭಾಗವನ್ನು ದರ್ಬಾರ್ ಹಾಲ್‍ಗೆ ತರಲಾಯಿತು. ದರ್ಬಾರ್ ಹಾಲ್‍ನಲ್ಲಿ ಅಳವಡಿಸಿರುವ ಸಿಸಿ ಟಿವಿಗಳನ್ನು ಬಟ್ಟೆಗಳಿಂದ ಮುಚ್ಚಿ ಬಳಿಕ ಸುಮಾರು 14 ಬಿಡಿ ಭಾಗಗಳಾಗಿ ವಿಂಗಡಿಸಲಾಗಿದ್ದ ಈ ಸಿಂಹಾಸನವನ್ನು ಜೋಡಿಸಿ, ಪರದೆ ಬಿಡಲಾಯಿತು. ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ, ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಿಸಲಾಯಿತು. ಬೆಳಗ್ಗೆ ಶಾಂತಿಹೋಮದೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ಆರಂಭ ಮಾಡಿ ಕಳಶ ಸ್ಥಾಪನೆ, ಪವಿತ್ರ ಜಲ ಪೆÇ್ರೀಕ್ಷಣೆ, ಹೋಮ ಸೇರಿದಂತೆ ಪೂರ್ವ ನಿರ್ಧರಿತ ಮುಹೂರ್ತದಲ್ಲಿ ಸಿಂಹಾಸನ ಜೋಡಣಾ ಕಾರ್ಯ ಸಂಪನ್ನಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಪಾದಪೂಜೆ ನೆರವೇರಿಸಿದರು.


ಅರಮನೆಯಲ್ಲಿ ನೆರವೇರುತ್ತಿದ್ದ ಸಿಂಹಾಸನಾ ಜೋಡಣಾ ಕಾರ್ಯದಿಂದಾಗಿ ಸಾರ್ವಜನಿಕರಿಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಎಲ್ಲ ಕಾರ್ಯಗಳನ್ನು ಪೆÇಲೀಸರ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು. ಸಿಂಹಾಸನದ ಜೋಡಣೆ ವೇಳೆ ಪ್ರಮೋದಾ ದೇವಿ ಒಡೆಯರ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.


ನವರಾತ್ರಿ ಮೊದಲ ದಿನವಾದ ಸೆ.22ರಂದು ಸಿಂಹಾಸನಕ್ಕೆ ಸಿಂಹ ಜೋಡಣಾ ಕಾರ್ಯ ನಡೆದ ನಂತರ ಖಾಸಗಿ ದರ್ಬಾರ್ ನಡೆಯುತ್ತದೆ. ಅಂದು ಮಧ್ಯಾಹ್ನದವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆಯುಧ ಪೂಜೆ ದಿನವಾದ ಅ.1ರಂದು ಮಧ್ಯಾಹ್ನದವರೆಗೆ ಹಾಗೂ ವಿಜಯದಶಮಿ ದಿನವಾದ ಅ.2ರಂದು ದಿನವಿಡೀ ಅರಮನೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಸಂಸದರಾದ ಬಳಿಕ ಎರಡನೇ ದರ್ಬಾರ್: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದರಾದ ಬಳಿಕ ಎರಡನೇ ಬಾರಿಗೆ ಖಾಸಗಿ ದರ್ಬಾರ್ ನಡೆಸುತ್ತಿದ್ದಾರೆ. ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಖಾಸಗಿ ದರ್ಬಾರ್ ಸೆ.22ರಿಂದ 10 ದಿನಗಳವರೆಗೆ ಅರಮನೆಯಲ್ಲಿ ನಡೆಯಲಿದೆ. ರತ್ನ ಖಚಿತ ಸಿಂಹಾಸನಾರೂಢರಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ದಸರಾ ಮುಗಿದ ಬಳಿಕವೂ ಕೆಲ ದಿನಗಳು ಸಾರ್ವಜನಿಕ ವೀಕ್ಷಣೆಗೆ ರತ್ನಖಚಿತ ಸಿಂಹಾಸನ ದರ್ಬಾರ್ ಹಾಲ್‍ನಲ್ಲಿ ಇರಲಿದ್ದು, ಅ.31ರಂದು ತೆರವು (ವಿಸರ್ಜನೆ) ಮಾಡಲಾಗುತ್ತದೆ.