
ಸಂಜೆವಾಣಿ ವಾರ್ತೆ
ಹನೂರು ಮೇ 16 :- ತಾಲ್ಲೂಕಿನ ಕೌದಳ್ಳಿ ವನ್ಯಜೀವಿ ವಲಯ ವ್ಯಾಪ್ತಿಯ ಚನ್ನಬಸವಹಳ್ಳ ಅರಣ್ಯ ಪ್ರದೇಶದಲ್ಲಿ ಚುಕ್ಕೆ ಜಿಂಕೆ ಹಾಗೂ ಕಡವೆಯನ್ನು ಬೇಟೆಯಾಡಿ ಮಾಂಸ ಕತ್ತರಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಗುರುವಾರ ಮದ್ಯ ಮಧ್ಯರಾತ್ರಿ ಸುಮಾರು 1-00 ಗಂಟೆ ವೇಳೆಗೆ ಕೌದಳ್ಳಿ ಶಾಖೆಯ ಸಾವಿರಮತ್ತಿ ಗಸ್ತಿನ ವೇಳೆ ಅರಣ್ಯ ಸಿಬ್ಬಂದಿ ರಾತ್ರಿಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ, ಆರು ಮಂದಿ ಆರೋಪಿಗಳು ನಾಡ ಬಂದೂಕಿನಿಂದ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸುತ್ತಿರುವುದು ಪತ್ತೆಯಾಗಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಇಬ್ಬರು ಬೇಟೆಗಾರರನ್ನು ಬಂಧಿಸಿದ್ದಾರೆ, ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಅರಬಗೆರೆ -75 ಗ್ರಾಮದ ಮಾದೇವ ಹಾಗೂ ಪೆÇನ್ನಾಚಿ ಗ್ರಾಮದ ಬಸವರಾಜು ಎಂದು ಗುರುತಿಸಲಾಗಿದೆ. ಇನ್ನುಳಿದ ನಾಲ್ವರು ಆರೋಪಿಗಳಿಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರೆಸಿದೆ.
ಕಾರ್ಯಾಚರಣೆ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ ಎಂ.ಸಿ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಮರಿಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ವಲಯ ಅರಣ್ಯಾಧಿಕಾರಿ ವಾಗೀಶ್ ಬಿ.ಜೆ. ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ದಾಳಿ ನಡೆಸಿದರು.




























