ಸಂಜೆವಾಣಿ ವಾರ್ತೆ
ಹನೂರು ಆ 1 :- ಅರಣ್ಯವಾಸಿಗಳ ಹಾಗೂ ಕಾಡಂಚಿನ ರೈತರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಬ್ಬಾಳಿಕೆಯನ್ನು ಮಾಡುತ್ತಾರೆ ಎಂದು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯು ಹನೂರು ಪಟ್ಟಣದ ಅರಣ್ಯ ಇಲಾಖೆಯ ಕಚೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಹನೂರು ಪಟ್ಟಣದ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್ ನಿಂದ ಮೆರವಣಿಗೆ ಮೂಲಕ ಹೋರಟ ಕರ್ನಾಟಕ ರಾಜ್ಯ ರೈತ ಸಂಘಟನೆಯು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮೆರವಣಿಗೆ ಮೂಲಕ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಜಮಾಯಿಸಿದ ರೈತರು ಇಲಾಖೆಯ ಸರ್ವಾಧಿಕಾರ ಧೋರಣೆ ನಡೆಯನ್ನು ಖಂಡಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಳಕ್ಕೆ ಜಿಲ್ಲಾಧಿಕಾರಿ ಹಾಗೂ ಇಲ್ಲ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟಸಿ ಬೆಳಗ್ಗೆ ಯಿಂದ ಸಂಜೆಯವರೆಗೂ ಪ್ರತಿಭಟನೆ ನಡೆಸಿ ರೈತರು ಮಹಿಳೆಯರು ತಮ್ಮ ಸಮಸ್ಯೆಗಳನ್ನು ತಿಳಿಸಿ ಬಗೆ ಹರಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಚೈತ್ರ ಹಾಗೂ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ ಕುಮಾರ್ ರವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರೈತರ ಸಮಸ್ಯೆಗಳನ್ನು ಆಲಿಸಿ ಮನವಿಯನ್ನು ಸ್ವೀಕರಿಸಿದರು.
ರೈತ ಸಂಘದ ಪ್ರತಿಭಟನೆಗೆ ಪ್ರಕ್ರಿಯೆ ನೀಡಿದ ತಹಸಿಲ್ದಾರ್ ಚೈತ್ರ ರವರು ಆಗಸ್ಟ್ 14ರ ಒಳಗೆ ಒಂದು ದಿನಾಂಕ ನಿಗದಿ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತರ ಜೊತೆ ಗೋಪಿನಾಥನ್ ಗ್ರಾಮ ಪಂಚಾಯಿತಿಯ ಆಲಂಬಾಡಿ ಗ್ರಾಮದಲ್ಲಿ ಸಭೆಯನ್ನು ಕರೆಯಲಾಗುತ್ತದೆ, ನಾಳೆ ನಡೆಯುವ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ರೈತರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಭರವಸೆಯನ್ನ ನೀಡಿದರು.
ಭರವಸೆಯಲ್ಲಿ ನೀಡಿದ ಬಳಿಕ ರೈತ ಮುಖಂಡರು ಚರ್ಚೆ ನಡೆಸಿ, ನಂತರ ಪ್ರತಿಭಟನೆಯನ್ನು ಕೈಬಿಟ್ಟರು. ಸಭೆ ನಡೆಯದೆ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಇದ್ದಲ್ಲಿ ಆಗಸ್ಟ್ 15ರಂದು ಮತ್ತೆ ಚಳುವಳಿ ಆರಂಭಿಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆಯೂ ಸಹ ನೀಡಿದರು.
ರೈತ ಸಂಘಟನೆಯ ಹಕ್ಕೋತ್ತಾಯಗಳು:
ಮಲೈ ಮಹದೇಶ್ವರ ಅರಣ್ಯ ವಲಯವನ್ನು ಹುಲಿ ಸಂರಕ್ಷಿತ ಅರಣ್ಯವನ್ನಾಗಿ ಘೋಷಣೆ ಮಾಡುವುದನ್ನು ರದ್ದು ಮಾಡಬೇಕು.
ಅರಣ್ಯದೊಳಗೆ ಜಾನುವಾರುಗಳು ಮೇಕೆ, ಕುರಿಗಳು ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಬೇಕು.
ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕುಗಳ 2006ರ ಕೇಂದ್ರ ಅಧಿಸೂಚನೆಯಂತೆ ಕಾಡಿನೊಳಗೆಡೆ ಇರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್ ಹಾಗೂ ಕುಡಿಯುವ ನೀರು, ರಸ್ತೆ ಒದಗಿಸಬೇಕಾಗಿರುವುದರಂದ ಯಾವುದಕ್ಕೂ ಅಡ್ಡಿಪಡಿಸಬಾರದು.
ಅರಣ್ಯದೊಳಗೆ ವ್ಯವಸಾಯ ಮಾಡುತ್ತಿರುವ ರೈತರ ಜಮೀನುಗಳನ್ನು ಜಂಟಿ ಸರ್ವೆ ಮಾಡಿಸಿ ಹಕ್ಕುಪತ್ರ ನೀಡಲು ಅನುಕೂಲ ಮಾಡಿಕೊಡಬೇಕು.
ಕಾಡುಪ್ರಾಣಿಗಳ ದಾಳಿಯಿಂದ ಹಾಗೂ ವಿಷಭರಿತ ಹಾವು ಕಚ್ಚಿ ಮೃತಪಟ್ಟ ರೈತರಿಗೆ 30 ಲಕ್ಷ ಪರಿಹಾರ ಕೊಡಬೇಕು ಹಾಗೂ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸಬೇಕು.
ಆನೆ, ಕಾಡುಹಂದಿ, ನವಿಲು, ಜಿಂಕೆ, ಗಿಳಿ ಮುಂತಾದ ಪ್ರಾಣಿ ಪಕ್ಷಿಗಳಿಂದ ರೈತರ ಬೆಳೆ ಹಾನಿಗೀಡಾದರೆ ಸಂಪೂರ್ಣ ನಷ್ಟ ವೆಚ್ಚವನ್ನು ಪರಿಹಾರವಾಗಿ ನೀಡಬೇಕು ಹಾಗೂ ದೂರು ನೀಡಲು ಅರಣ್ಯ ಇಲಾಖೆ ಸಹಾಯವಾಣಿಯನ್ನು ಆರಂಭಿಸಬೇಕು.
ಆನೆ ಸೇರಿದಂತೆ ವನ್ಯಜೀವಿಗಳು ರೈತರ ಜಮೀನುಗಳಿಗೆ ಬಾರದಂತೆ ಸೋಲಾರ್ ಬೇಲಿ ಸಮೇತವಾಗಿ ರೈಲ್ವೇ ಬ್ಯಾರಿಕೇಡ್ ಬೇಲಿಯನ್ನು ಅರಣ್ಯದ ಗಡಿಯುದ್ದಕ್ಕು ನಿರ್ಮಿಸಬೇಕು. ಈಗಿರುವ ಅರಣ್ಯ ಇಲಾಖೆಯನ್ನು ರೈತ ಸ್ನೇಹಿ ಅರಣ್ಯ ಇಲಾಖೆಯನ್ನಾಗಿ ಪರಿವರ್ತಿಸಬೇಕು.
ಹೂಗ್ಯಂ ವಲಯ ಹಾಗೂ ಕಿರೇಪಾತಿ ಗ್ರಾಮಗಳ ಕಾಡಂಚಿನಲ್ಲಿ ರೈತರ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿರುವುದನ್ನು ರೈತರಿಗೆ ವಾಪಸ್ ನೀಡಬೇಕು.
ಹೂಗ್ಯಂ ಗ್ರಾಮದ ರೈತರೊಬ್ಬರ ಜಮೀನ ಫಸಲಿಗೆ ಆನೆ ದಾಳಿ ಮಾಡಿದಾಗ ನಿರ್ಲಕ್ಷ್ಯ ವಹಿಸಿದ್ದ ಅರಣ್ಯ ಇಲಾಖೆಯ ನೌಕರರಿಗೆ ರೈತ ಹಾಗೂ ರೈತ ಮಹಿಳೆಯರು ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ಅರಣ್ಯ ಇಲಾಖೆಯು ರೈತ ಮಹಿಳೆಯರು ಹಾಗೂ ರೈತರ ಮೇಲೆ ಹಾಕಿರುವ ಕೇಸನ್ನು ವಾಪಸ್ ಪಡೆಯಬೇಕು ಎಂದು ಮನವಿಯನ್ನು ಸಲ್ಲಿಸಿದರು.


































