Home ಜಿಲ್ಲೆ ಮಂಗಳೂರು ಅರಂತೋಡಿನ ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರ ಉಪಟಳ; ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ...

ಅರಂತೋಡಿನ ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರ ಉಪಟಳ; ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಸಮಾಲೋಚನಾ ಸಭೆ

ಸುಳ್ಯ:ಅರಂಡೋಡು ಗ್ರಾಮದ ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರವಾಗಿ ಆಗುತ್ತಿರುವ ಉಪಟಳದಿಂದಾಗಿ ಕೃಷಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ವತಿಯಿಂದ ನೊಂದ ಕೃಷಿಕರ ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆ ಭಾನುವಾರ ನಡೆಯಿತು.
ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಅಧ್ಯಕ್ಷತೆಯಲ್ಲಿ ಅಡ್ತಲೆ ಶಾಲಾ ವಠಾರದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಾಡಾನೆ ದಾಳಿಯಿಂದ ನೊಂದ ಕೃಷಿಕರು ತಮ್ಮ ಬೆಳೆ ನಾಶವಾದ ಕುರಿತು ಹಾಗೂ ಅರಂತೋಡು-ಅಡ್ತಲೆ ರಸ್ತೆಯಲ್ಲಿ ಸಂಚರಿಸುವಾಗ ಭಯದ ವಾತಾವರಣ ನಿರ್ಮಾಣ ಆಗುತ್ತಿರುವ ಬಗ್ಗೆ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಿವೃತ್ತ ಯೋಧ ಜಗದೀಶ್ ಕೆ.ಪಿ ಮಾತನಾಡಿ ಕಾಡಾನೆ ದಾಳಿಯನ್ನು ತಡೆಯಲು ಸಾರ್ವಜನಿಕರಿಂದ ಸಾಧ್ಯವಿರುವ ಕ್ರಮಗಳನ್ನು ಹಾಗೂ ಅರಣ್ಯ ಇಲಾಖೆಗಳಲ್ಲಿರುವ ಕ್ರಮಗಳು ಹಾಗೂ ಅನುದಾನದ ಕುರಿತು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ ಮಾತನಾಡಿ ಇಲಾಖೆ ಹಾಗೂ ಸಾರ್ವಜನಿಕರು ಒಗ್ಗೂಡಿಕೊಂಡು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಸಭೆಯಲ್ಲಿ ಸುಮಾರು ೫೦ ಕ್ಕೂ ಮಿಕ್ಕಿ ಸಾರ್ವಜನಿಕರು ಭಾಗಿಯಾಗಿ ವಿಚಾರ ವಿನಿಮಯ ಮತ್ತು ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಆದ ನಿರ್ಣಯಗಳು :
ಎಲಿಪೆಂಟ್ ಟಾಸ್ಕ್ ಫೋರ್ಸ್‌ಅನ್ನು ಅತೀ ಶೀಘ್ರ ಅನುಷ್ಠಾನ ಗೊಳಿಸಲು ಸರಕಾರಕ್ಕೆ ಮನವಿ ಮಾಡಿ ಜನಪ್ರತಿನಿದಿನಗಳ ಮೂಲಕ ಒತ್ತಡ ಹೇರುವುದು. ಸೋಲಾರ್ ಫೆನ್ಸಿಂಗ್ ವ್ಯವಸ್ಥೆಯನ್ನು ಅತೀ ಶೀಘ್ರವಾಗಿ ಅನುಷ್ಠಾನ ಕೈಗೊಳ್ಳಲು ಇಲಾಖೆಯ ಮುಖಾಂತರ ಸರಕಾರಕ್ಕೆ ಮನವಿ ನೀಡಿ ಸರ್ಕಾರದ ಮಟ್ಟದಲ್ಲಿ ಒತ್ತಡ ತರಲು ನಿರ್ಣಯ ಮಾಡಲಾಯಿತು.
ಕಾಡಾನೆ ಉಪಟಳ ಭಾಧಿತ ಪ್ರದೇಶಗಳಿಗೆ ಶಾಸಕರು ಹಾಗೂ ಎ.ಸಿ.ಎಫ್ ಅವರುಗಳನ್ನು ಕರೆಸಿ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕೃಷಿಕರ ಹಾಗೂ ನಮ್ಮ ಭಾಗದ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಕೈಗೊಳ್ಳಬೇಕಾದ ಶಾಶ್ವತ ಕ್ರಮಗಳ ಕುರಿತು ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಕರೆಯಲು ನಿರ್ಣಯಿಸಲಾಯಿತು.
ಆನೆ ದಾಳಿಯನ್ನು ತಡೆಯಲು ಅರಣ್ಯ ಇಲಾಖೆಯಲ್ಲಿರುವ ಅನುದಾನದಲ್ಲಿ ೧೦ ಪ್ರತಿಶತ ಕೃಷಿಕರ ಮೂಲಕ ಹಾಗೂ ೯೦ ಪ್ರತಿಶತ ಇಲಾಖೆಯಿಂದ ಅನುದಾನ ಬಿಡುಗಡೆಗೆ ಒತ್ತಾಯಿಸಿ ಸರಕಾರಕ್ಕೆ ಮನವಿ ಸಲ್ಲಿಸುವುದು. ಅಡ್ತಲೆ ಪ್ರದೇಶದಲ್ಲಿರುವ ಕಾಡಾನೆಗಳನ್ನು ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಜೊತೆಗೂಡಿ ಹೊರ ಪ್ರದೇಶಗಳ ಕಾಡಿನ ಪ್ರದೇಶಕ್ಕೆ ಓಡಿಸುವುದು.
ಅರಣ್ಯ ಹಾಗೂ ಕಾಡುಪ್ರಾಣಿಗಳ ಉಳಿವಿನ ಭವಿಷ್ಯದ ಹಿತದೃಷ್ಟಿಯಿಂದ ಸ್ಪಂದನ ಗೆಳೆಯರ ಬಳಗದ ಸಹಯೋಗದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸೀಡ್ ಬಾಲ್ ಅಭಿಯಾನವನ್ನು ಮುಂದಿನ ಮಳೆಗಾಲದಲ್ಲಿ ನಡೆಸಲು ಎಂದು ತೀರ್ಮಾನಿಸಲಾಯಿತು.