
ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಪಥ ಕಾರ್ಯಕ್ರಮಕ್ಕೆ ಚಾಲನೆ
ಸುಳ್ಯ:”ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಣ ಮಕ್ಕಳಲ್ಲಿ ವ್ಯಕ್ತಿತ್ವವನ್ನು ರೂಪಿಸುತ್ತದೆ. ಅಂದಿನ ದಿನ ಈ ಶಾಲೆಯ ನಿರ್ಮಾಣದಲ್ಲಿ ಅನೇಕರ ಬೆವರ ಹನಿಯಿದೆ. ಇಲ್ಲಿ ಕಲಿತವರು ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ್ದಾರೆ. ಅನೇಕ ಉನ್ನತ ಉದ್ಯೋಗ, ಹುದ್ದೆಗಳಲ್ಲಿದ್ದಾರೆ. ಅಮೃತ ಪಥ ಅಭಿವೃದ್ಧಿ ಪಥವಾಗಲಿ” ಎಂದು ಹಿರಿಯ ಸಾಹಿತಿ, ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಬ್ರಾಯ ಚೊಕ್ಕಾಡಿ ಹೇಳಿದರು.
ಅವರು ಭಾನುವಾರ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಪಥ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿ “ಅಂದಿನ ಕಷ್ಟಕರ ದಿನಗಳಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸುವಲ್ಲಿ ಹಿರಿಯರು ಬಹಳಷ್ಟು ಶ್ರಮಿಸಿದ್ದಾರೆ. ಉತ್ತಮ ಶಿಕ್ಷಣ ಸಂಸ್ಥೆಗಳು ಇದ್ದಾಗ ಊರಿನ ಅಭಿವೃದ್ಧಿಯಾಗುತ್ತದೆ.” ಎಂದು ಹೇಳಿದರು.
ಮುಖ್ಯ ಅತಿಥಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ. ಟೀಮ್ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಮಾತನಾಡಿ “ದೇವರ ನಾಡಿನ ಮಧ್ಯೆ ಪಂಜದ ಪವಿತ್ರ ಶಿಕ್ಷಣ ಸಂಸ್ಥೆಯಿದೆ. ಹಿಂದಿನ ಗುರು ಶಿಷ್ಯ ಸಂಬಂಧಗಳು ಮುಂದುವರಿಯಬೇಕು.” ಎಂದು ಹೇಳಿದರು.
ಅಮೃತ ಪಥ ಸಮಿತಿ ಅಧ್ಯಕ್ಷ ಜಾಕೆ ಮಾಧವ ಗೌಡ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೂಫಿ ಪೆರಾಜೆ, ಅಮೃತ ಪಥ ಸಮಿತಿ ಪ್ರಧಾನ ಕಾರ್ಯದರ್ಶಿ ಸವಿತಾರ ಮುಡೂರು, ಪ್ರಧಾನ ಸಂಚಾಲಕ ಚಿನ್ನಪ್ಪ ಸಂಕಡ್ಕ, ಕಾರ್ಯದರ್ಶಿ ಗುರು ಪ್ರಸಾದ್ ತೋಟ, ಖಜಾಂಜಿ ಜಯರಾಮ ಕಂಬಳ, ಶಾಲಾ ಮುಖ್ಯೋಪಾಧ್ಯಾಯ ದೇವಿ ಪ್ರಸಾದ್ ಎ, ಪ್ರಾಂಶುಪಾಲ ಚಿದಾನಂದ ಕೆ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಸುಚಿನ್ನ ಕಾಣಿಕೆ, ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ, ರಮ್ಯ, ಕಾವ್ಯಶ್ರೀ, ಸವಿತಾ, ಯಶ್ಮಿತಾ ಪ್ರಾರ್ಥಿಸಿದರು. ಪ್ರಧಾನ ಸಂಚಾಲಕ ಚಿನ್ನಪ್ಪ ಸಂಕಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. .ಪ್ರಾಂಶುಪಾಲ ಚಿದಾನಂದ ಕೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ದೇವಿಪ್ರಸಾದ್ ಎ ವಂದಿಸಿದರು. ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.




























