ನವದೆಹಲಿ,ಸೆ.೨೫- ದೇಶವನ್ನು ೨೦೪೭ರ ವೇಳೆಗೆ ‘ಅಭಿವೃದ್ದಿ ಹೊಂದಿದ ರಾಷ್ಟ್ರ ನಿರ್ಮಾಣದ ಗುರಿ ಸಾಧಿಸುತ್ತ ಭಾರತ ದಾಪುಗಾಲು ಇಟ್ಟಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ಚಿಪ್‌ನಿಂದ ಹಡಗಿನವರೆಗೆ’ ಪ್ರತಿಯೊಂದು ಉತ್ಪನ್ನಗಳನ್ನು ದೇಶದಲ್ಲಿ ತಯಾರಿಸಬೇಕು ಎನ್ನುವ ಗುರಿ ಹೊಂದಿದ್ದು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಕೇಂದ್ರದ ಉದ್ದೇಶ ಎಂದು ಹೇಳಿದ್ದಾರೆ.ಯುಪಿಐ, ಆಧಾರ್, ಡಿಜಿಲಾಕರ್ ಮತ್ತು ಒಎನ್‌ಡಿಸಿಯಂತಹ ವೇದಿಕೆಗಳು ವ್ಯಕ್ತಿಗಳನ್ನು ಸಬಲೀಕರಣಗೊಳಿಸುತ್ತಿವೆ ಮತ್ತು ಎಲ್ಲರಿಗೂ ಅವಕಾಶ ಒದಗಿಸುತ್ತಿವೆ. ಇದರರ್ಥ “ಎಲ್ಲರಿಗೂ ವೇದಿಕೆ, ಎಲ್ಲರಿಗೂ ಪ್ರಗತಿ” ಎನ್ನುವುದು ಕೇಂದ್ರದ ಸಂಕಲ್ಪವಾಗಿದೆ ಎಂದಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಇಂದಿನಿಂದ ಇದೇ ೨೯ರವೆಗೆ ನಡೆಯಲಿರುವ ಉತ್ತರ ಪ್ರದೇಶ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನ-೨೦೨೫ ರ ೩ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು ಭಾರತದಲ್ಲಿ ತಯಾರಿಸಲಾಗುವ ಶೇಕಡಾ ೫೫ ರಷ್ಟು ಮೊಬೈಲ್ ಫೋನ್‌ಗಳು ಉತ್ತರ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತಿದೆ ಎಂದಿದ್ದಾರೆ.
ಜೊತೆಗೆ ಸೆಮಿಕಂಡಕ್ಟರ್ ವಲಯದಲ್ಲಿ ಭಾರತದ ಸ್ವಾವಲಂಬನೆ ಹಾದಿಯತ್ತ ಸಾಗಿದೆ.ಫಿನ್‌ಟೆಕ್ ವಲಯ ಚರ್ಚೆಯ ಪ್ರಮುಖ ವಿಷಯವಾಗಿದೆ. ಎಲ್ಲರಿಗೂ ಅನುಕೂಲವಾಗುವ ನವೀನ ವೇದಿಕೆಗಳನ್ನು ಅಭಿವೃದ್ಧಿಪಡಿಸಿದೆ, ಹಣಕಾಸು ಮತ್ತು ಡಿಜಿಟಲ್ ಸೇವೆಗಳಿಗೆ ಸಮಾನ ಪ್ರವೇಶ ಖಚಿತಪಡಿಸಲಾಗಿದೆ ಎಂದರು.
“ಇಂದು ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ. ದೀನ್‌ದಯಾಳ್ ಜೀ ನಮಗೆ ಅಂತ್ಯೋದಯದ ಮಾರ್ಗ ತೋರಿಸಿದರು. ಬಡವರ ಉನ್ನತಿ. ಅಂತ್ಯೋದಯ ಎಂದರೆ ಅಭಿವೃದ್ಧಿ ಸಮಾಜದ ಅತ್ಯಂತ ಅಂಚಿನಲ್ಲಿರುವ ವರ್ಗಗಳನ್ನು ಸಹ ತಲುಪಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ) ಪೋರ್ಟಲ್ ಮೂಲಕ, ಸುಮಾರು ೨೫ ಲಕ್ಷ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ಸರ್ಕಾರಕ್ಕೆ ಸರಬರಾಜು ಒದಗಿಸುತ್ತಿದ್ದಾರೆ. ಸಣ್ಣ ಅಂಗಡಿಯವರು ಮತ್ತು ವ್ಯಾಪಾರಿಗಳು, ತಮ್ಮ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು ಎಂದಿದ್ದಾರೆ.
ಹಿಂದಿನ ಸರ್ಕಾರಗಳಲ್ಲಿ, ಇದನ್ನು ಪರಿಗಣಿಸುವುದು ಅಸಾಧ್ಯವಾಗಿತ್ತು, ಇಂದು ಸಣ್ಣ ಅಂಗಡಿಯವರು ಸಹ ಈ ಪೋರ್ಟಲ್ ಮೂಲಕ ತಮ್ಮ ಸರಕುಗಳನ್ನು ಮಾರಾಟ ಮಾಡುತ್ತಿದ್ದಾರೆ… ಭಾರತ ೨೦೪೭ ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣ ನಮ್ಮ ಗುರಿ ಎಂದು ತಿಳಿಸಿದ್ದಾರೆ. ಚಿಪ್‌ನಿಂದ ಹಡಗಿನವರೆಗೆ ಎಲ್ಲವನ್ನೂ ಭಾರತ ದಲ್ಲಿ ತಯಾರಿಸಬೇಕೆಂದು ನಾವು ಬಯಸುತ್ತೇವೆ ಎಂದು ಪ್ರಧಾನಿ ಹೇಳುತ್ತಾರೆ.
“ಅಲ್ಟಿಮೇಟ್ ಸೋರ್ಸಿಂಗ್ ಇಲ್ಲಿ ಪ್ರಾರಂಭ ವಾಗುತ್ತದೆ” ಎಂಬ ವಿಷಯದ ಅಡಿಯಲ್ಲಿ ಗ್ರೇಟರ್ ನೋಯ್ಡಾದಲ್ಲಿ ಉತ್ತರ ಪ್ರದೇಶ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನ-೨೦೨೫ (UPIಖಿS-೨೦೨೫) ಸೆಪ್ಟೆಂಬರ್ ೨೫ ರಿಂದ ೨ ರವರೆಗೆ ನಡೆಯಲಿದೆ. ಇದು ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿರುತ್ತದೆ – ನಾವೀನ್ಯತೆ, ಏಕೀಕರಣ ಮತ್ತು ಅಂತರಾಷ್ಟ್ರೀಕರಣ.
ಎಕೆ- ೨೦೩ ರೈಫಲ್ ಉತ್ಪಾದನೆ
ರಷ್ಯಾದ ಸಹಯೋಗದಲ್ಲಿ ಶೀಘ್ರದಲ್ಲೇ ಉತ್ತರ ಪ್ರದೇಶದಲ್ಲಿ ಎಕೆ-೨೦೩ ರೈಫಲ್‌ಗಳ ಉತ್ಪಾದನೆ ಪ್ರಾರಂಭವಾಗಲಿದೆ, ಇದರಿಂದ ದೇಶದ ರಕ್ಷಣಾ ಸಾಮರ್ಥ್ಯ ಹೆಚ್ಚಳಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದರ ಜೊತೆಗೆ ಚಿಪ್‌ನಿಂದ ಹಡಗಿನವರೆಗೆ ಎಲ್ಲವನ್ನೂ ಭಾರತದಲ್ಲಿ ತಯಾರಿಸಬೇಕೆಂದು ಬಯಸುತ್ತಿದ್ದು ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
























