
ಬಂಟ್ವಾಳ: ಬಂಟ್ವಾಳದ ಕಾಂಬೋಡಿ ಇರಾಕೋಡಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಅವರ ಮೃತದೇಹವನ್ನು ಮೇ ೨೮ರ ಬುಧವಾರ ಉಳ್ಳಾಲದಿಂದ ಕೊಳತ್ತಮಜಲಿನವರೆಗೆ ಮೆರವಣಿಗೆಯಲ್ಲಿ ಸಾಗಿಸಿ ಬಳಿಕ ಕೊಳತ್ತಮಜಲು ಮಸೀದಿ ಆವರಣದಲ್ಲಿ ದಘನ ಕಾರ್ಯ ನಡೆಸಲಾಯಿತು.
ಮೃತದೇಹ ಬಿ.ಸಿ.ರೋಡಿಗೆ ಆಗಮಿಸುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದರು. ಮನೆಯ ಬಳಿಯೂ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಪೇಟೆಯಲ್ಲಿ ಜನಸಂಚಾರವೂ ವಿರಳವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರವು ವಿಶೇಷ ಗಮನಹರಿಸಬೇಕು ? ಡಾ. ಮುಹಮ್ಮದ್ ಸಾದ್ ಬೆಲ್ಗಾಮಿ
ಬಂಟ್ವಾಳ ತಾಲೂಕಿನ ಕೊಳ್ತಮಜಲಿನಲ್ಲಿ ಅಬ್ದುಲ್ ರಹ್ಮಾನ್ ಎಂಬ ಯುವಕನ ಹತ್ಯೆಯನ್ನು ಜಮಾಅತ್ ಇಸ್ಲಾಮೀ ಹಿಂದ್, ಕರ್ನಾಟಕವು ತೀವ್ರವಾಗಿ ಖಂಡಿಸುತ್ತದೆ. ರಾಜ್ಯದ ಜನತೆಯು ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡುವಂತೆ ನಾವು ವಿನಂತಿಸುತ್ತೇವೆ.
ಕರಾವಳಿ ಪ್ರದೇಶದಲ್ಲಿ ದ್ವೇಷ ಭಾಷಣ, ಪ್ರತೀಕಾರದ ಕೊಲೆಗಳು, ಮತ್ತು ಪ್ರಚೋದನಕಾರಿ ರಾಜಕಾರಣವು ಸಾಮಾನ್ಯವಾಗಿದ್ದು, ಇವುಗಳನ್ನು ವ್ಯವಸ್ಥಿತವಾಗಿ ಪೋಷಿಸಲಾಗುತ್ತಿದೆ. ಕೊಲೆಗಾರನಿಗೆ ತಾನು ಯಾಕೆ ಕೊಲೆ ಮಾಡುತ್ತಿದ್ದೇನೆ ಮತ್ತು ಕೊಲೆಯಾಗುವವನಿಗೆ ತಾನು ಯಾಕೆ ಕೊಲೆಯಾಗುತ್ತಿದ್ದೇನೆ ಎಂಬುದೇ ತಿಳಿಯದ ತಲೆಮಾರು ಇಲ್ಲಿ ಸೃಷ್ಟಿಯಾಗುತ್ತಿರುವುದು ದುರಂತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರವು ವಿಶೇಷ ಗಮನಹರಿಸಬೇಕು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ ನಿಯಂತ್ರಣಕ್ಕಾಗಿ ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ ರಚನೆಯ ಸರ್ಕಾರದ ನಿರ್ಧಾರಕ್ಕೆ ಅಬ್ದುಲ್ ರಹ್ಮಾನ್ ಕೊಲೆ ದೊಡ್ಡ ಸವಾಲು ಎಸೆದಿದೆ. ಯುವಕರನ್ನು ತಪ್ಪುದಾರಿಗೆ ತಳ್ಳುವ ದ್ವೇಷ ಭಾಷಣಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಈ ಅಮಾನವೀಯ ಕೃತ್ಯವನ್ನು ನಡೆಸಿದ ಅಪರಾಧಿಗಳನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಜಮಾಅತ್ ಇಸ್ಲಾಮೀ ಹಿಂದ್, ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಲ್ಗಾಮಿ ತಿಳಿಸಿದ್ದಾರೆ.