ಪುತ್ತೂರು; ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ರಸ್ತೆಗಳ ಸ್ಥಿತಿ ಸಂಚಾರಯೋಗ್ಯವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಯಿಂದ ಹಿಡಿದು ರಾಜ್ಯರಸ್ತೆಗಳು, ಲೋಕೋಪಯೋಗಿ ಇಲಾಖಾ ರಸ್ತೆಗಳು ಹಾಗೂ ಸ್ಥಳೀಯಾಡಳಿತ ರಸ್ತೆಗಳು ನಾದುರಸ್ಥಿಯಲ್ಲಿವೆ. ಇದು ಕೇವಲ ಪುತ್ತೂರು ಮಾತ್ರವಲ್ಲ. ಪುತ್ತೂರು ಉಪವಿಭಾಗದ ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕಿನ ರಸ್ತೆಗಳ ಸ್ಥಿತಿಯಾಗಿದೆ. ಈ ರಸ್ತೆಗಳ ದುಸ್ಥಿತಿಯನ್ನು ಸರಿಪಡಿಸಲು ಇಲಾಖೆಗಳು ಮಳೆಯ ಕಾರಣವನ್ನು ಮುಂದಿಟ್ಟಿವೆ. ಡಾಮಾರು ಹಾಕಲು ಮಳೆಯ ಸಮಸ್ಯೆಯಾದರೂ ಕನಿಷ್ಟ ರಸ್ತೆಯಲ್ಲಿರುವ ಅಪಾಯಕಾರಿ ಗುಂಡಿಗಳಿಗೆ ಕನಿಷ್ಟ ಕೆಂಪುಕಲ್ಲು ಹಾಕಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಲ್ಲಿಯೂ ಇಲಾಖೆಗಳು ವಿಫಲವಾಗುತ್ತಿವೆ.
ಉಪ್ಪಿನಂಗಡಿ ಕಡಬ ರಸ್ತೆಯ ಬಹುತೇಕ ಕಡೆಗಳಲ್ಲಿ ಇಂತಹ ಅಪಾಯಕಾರಿ ಹೊಂಡಗಳು ತುಂಬಿದ್ದು, ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ವಾಹನ ಚಾಲಕರು ಬೇಸತ್ತುಹೋಗಿದ್ದಾರೆ. ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಎಂಬಲ್ಲಿ ಈ ರಾಜ್ಯರಸ್ತೆಯಲ್ಲಿ ದೊಡ್ಡದೊಂದು ಮರಣಗುಂಡಿ ನಿರ್ಮಾಣವಾಗಿದ್ದು, ಇದೀಗ ಈ ಹೊಂಡದಲ್ಲಿ ಬಾಳೆಗಿಡವನ್ನು ನೆಡುವ ಮೂಲಕ ಇಲಾಖೆಗಳ ನಿರ್ಲಕ್ಷ್ಯತೆಗೆ ಮೌನ ಪ್ರತಿಭಟನೆ ಆರಂಭಿಸಲಾಗಿದೆ.
ಉಪ್ಪಿನಂಗಡಿ ಕಡಬ ರಸ್ತೆಯ ಪುಳಿತ್ತಡಿ, ಪೆರಿಯಡ್ಕ, ಕೆಮ್ಮಾರ ಹಾಗೂ ಕೊಲ ಭಾಗಗಳಲ್ಲಿ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿದೆ. ಇದರಿಂದ ದ್ವಿಚಕ್ರ ವಾಹನ ಚಾಲಕರು ಹಲವು ಬಾರಿ ಅಪಾಯಕ್ಕೀಡಾಗಿದ್ದಾರೆ. ಹಾಗಿದ್ದರೂ ಈ ಹೊಂಡಗಳನ್ನು ತಾತ್ಕಾಲಿಕವಾಗಿ ಮಣ್ಣು ಹಾಕಿ ಮುಚ್ಚುವ ಕಾಯಕಕ್ಕೂ ಇಲಾಖೆ ಮನಸ್ಸು ಮಾಡಿಲ್ಲ. ಇದರಿಂದ ರೋಸಿ ಹೋಗಿರುವ ಜನತೆ ಇಲಾಖಾಧಿಕಾರಿಗಳ ಗಮನ ಸೆಳೆಯಲು ಬಾಳೆಗಿಡ ನೆಟ್ಟಿದ್ದಾರೆ.
ಇದು ಕೇವಲ ಉಪ್ಪಿನಂಗಡಿ-ಕಡಬ ರಸ್ತೆಯ ಸ್ಥಿತಿಯಲ್ಲ. ಪುತ್ತೂರು ಉಪ್ಪಿನಂಗಡಿಯ ಚತುಷ್ಪಥ ರಸ್ತೆಯಲ್ಲೂ ಇದೇ ರೀತಿ ಹೊಂಡಗಳು ನಿರ್ಮಾಣವಾಗಿದೆ. ಕೆಲಸವೊಂದು ಹೊಂಡಗಳು ಭಾರೀ ಗಾತ್ರದಲ್ಲಿದ್ದು, ಅಪಾಯಕಾರಿಯಾಗುತ್ತಿವೆ. ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಗುರುವಾಯನಕೆರೆ ರಸ್ತೆಯಂತೂ ನಾದುರಸ್ಥಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಉಪ್ಪಿನಂಗಡಿಯಿಂದ ಜಾರಿಗೆ ಬೈಲು ತನಕದ ರಸ್ತೆಯಲ್ಲಿ ಸಂಚಾರ ಮಾಡುವ ಪರಿಸ್ಥಿತಿಯೇ ಇಲ್ಲದಂತಾಗಿದೆ. ಸುಳ್ಯ ತಾಲೂಕಿನಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಬೆಳ್ಳಾರೆ-ಸುಳ್ಯ ರಸ್ತೆ ವಾಹನ ಸವಾರರ ಪಾಲಿಗೆ ಸವಾಲು ಹಾಕುತ್ತಿದೆ.
ಮಳೆ ಬಿಟ್ಟ ತಕ್ಷಣ ದುರಸ್ಥಿ
ಈ ರಾಜ್ಯ ರಸ್ತೆಯಲ್ಲಿನ ಹೊಂಡಗಳಿಗೆ ತಾತ್ಕಾಲಿಕವಾಗಿ ಮಣ್ಣು ತುಂಬಿಸುವ ಕೆಲಸ ಮಾಡಲಾಗಿತ್ತು. ಆದರೆ ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಕಾರಣ ಮಣ್ಣು ಹಾಕುವುದನ್ನು ಕೈಬಿಡಲಾಗಿದೆ. ಇದೀಗ ಮಳೆ ಕಡಿಮೆಯಾಗುವ ಲಕ್ಷಣ ಕಂಡುಬಂದಿದೆ. ಮಳೆ ಬಿಟ್ಟ ತಕ್ಷಣ ಜಲ್ಲಿ ಹಾಕಿ ಈ ಹೊಂಡಗಳನ್ನು ಮುಚ್ಚುವ ಕೆಲಸ ಮಾಡಲಾಗುವುದು. ನಿರಂತರವಾಗಿ ಮಳೆಯಾದ ಕಾರಣ ರಸ್ತೆಗಳ ಅವ್ಯವಸ್ಥೆಗೆ ಕಾರಣವಾಗಿದೆ. ಮಳೆಯ ನಡುವೆ ಈ ಹೊಂಡಗಳನ್ನು ದುರಸ್ಥಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಮಳೆ ಕಡಿಮೆಯಾಗುವುದನ್ನು ಕಾಯಬೇಕಾಗಿದೆ ಎಂದು ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.




























