ಅಪಘಾತ: ಬೆಂಗಳೂರಿಗ ಸಾವು

ಶಿವಮೊಗ್ಗ, ಜೂ. 5: ಖಾಸಗಿ ಪ್ರಯಾಣಿಕ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ, ಕಾರಿನಲ್ಲಿದ್ದ ಓರ್ವರು ಮೃತಪಟ್ಟು ಸುಮಾರು 10 ಜನರು ಗಾಯಗೊಂಡ ಘಟನೆ, ಶಿವಮೊಗ್ಗ ನಗರದ ಎಲ್ ಎಲ್ ಆರ್ ರಸ್ತೆಯಲ್ಲಿ ಜೂ. 5 ರ ಮುಂಜಾನೆ ನಡೆದಿದೆ.


ಬೆಂಗಳೂರಿನ ನಿವಾಸಿ ಪ್ರದೀಪ್ (50) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಚಾಲಕನೊಂದಿಗೆ ಕಾರಿನಲ್ಲಿ ಆಗಮಿಸುತ್ತಿದ್ದರು.


ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರದೀಪ್ ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಘಟನೆಯಲ್ಲಿ ಎರಡು ವಾಹನಗಳ ಚಾಲಕರು ಸೇರಿದಂತೆ ಬಸ್ ನಲ್ಲಿದ್ದ 8 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಮೆಗ್ಗಾನ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವೇಕ ಟ್ರಾವೆಲ್ಸ್ ಖಾಸಗಿ ಬಸ್, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿತ್ತು. ತದನಂತರ ಸಾಗರಕ್ಕೆ ತೆರಳಬೇಕಾಗಿತ್ತು. ಎಲ್‍ಎಲ್‍ಆರ್ ರಸ್ತೆಯಲ್ಲಿ ಬಸ್ ತೆರಳುತ್ತಿದ್ದ ವೇಳೆ, ಗೋಪಿ ಸರ್ಕಲ್ ಕಡೆಯಿಂದ ಸವಾರ್ ಲೈನ್ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.


ಕಾರಿಗೆ ಡಿಕ್ಕಿಯಾದ ನಂತರ ಬಸ್ ಸಮೀಪದ ಕಟ್ಟಡಕ್ಕೂ ಡಿಕ್ಕಿ ಹೊಡೆದಿದೆ. ಬಸ್ ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಿರಿದಾದ ರಸ್ತೆಯಲ್ಲಿ ಮಿತಿಮೀರಿದ ವೇಗ, ಅಜಾಗರೂಕ ಚಾಲನೆಯಿಂದ ಅವಘಡ ಸಂಭವಿಸಿದೆ.


ಘಟನಾ ಸ್ಥಳಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸಂಜೀವ್ ಪಾಟೀಲ್, ಟ್ರಾಫಿಕ್ ಸರ್ಕಲ್ ಇನ್ಸ್’ಪೆಕ್ಟರ್ ದೇವರಾಜ್, ಪಶ್ಚಿಮ ಟ್ರಾಫಿಕ್ ಠಾಣೆ ಸಬ್ ಇನ್ಸ್’ಪೆಕ್ಟರ್ ಗಳಾದ ತಿರುಮಲೇಶ್, ಭಾರತಿ ಬಿ ಹೆಚ್ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.